ಪರಿಷತ್ ಚುನಾವಣೆ ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು,ನ.೧೬- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ೨೫ ಸ್ಥಾನಗಳಿಗೆ ಡಿ. ೧೦ ರಂದು ನಡೆಯಲಿರುವ ಚುನಾವಣೆಗೆ ಇಂದು ಅಧಿಸೂಚನೆ ಹೊರ ಬಿದ್ದಿದ್ದು, ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭವಾಗಿದೆ.
ರಾಜ್ಯದ ೨೦ ಜಿಲ್ಲೆಗಳ ೨೫ ವಿಧಾನ ಪರಿಷತ್ ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ ಆಯಾ ಜಿಲ್ಲೆಗಳ ಚುನಾವಣಾಧಿಕಾರಿಗಳು ಇಂದು ಅಧಿಸೂಚನೆ ಹೊರಡಿಸಿದ್ದಾರೆ.
ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ನ.೨೩ ಕೊನೆಯ ದಿನವಾಗಿದೆ.
ನಾಮಪತ್ರಗಳ ಪರಿಶೀಲನೆ ನ. ೨೪ ರಂದು ನಡೆಯಲಿದ್ದು, ನಾಮಪತ್ರಗಳ ವಾಪಸ್ಸಾತಿಗೆ ನ. ೨೬ ಕಡೆಯ ದಿನವಾಗಿದ. ಈ ಎಲ್ಲ ಕ್ಷೇತ್ರಗಳಿಗೆ ಡಿ. ೧೦ ರಂದು ಬೆಳಿಗ್ಗೆ ೮ ರಿಂದ ಸಂಜೆ ೪ ರವರೆಗೆ ಮತದಾನ ನಡೆಯಲಿದೆ.
ಡಿ. ೧೪ ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಸ್ಳಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ೨೫ ಸದಸ್ಯರುಗಳ ಅವಧಿ ಜನವರಿ ೫ಕ್ಕೆ ಅಂತ್ಯವಾಗಲಿದೆ. ಈ ಸ್ಥಾನಗಳಿಗೆ ಚುನಾವಣಾ ಆಯೋಗ ನ. ೯ ರಂದು ದಿನಾಂಕ ನಿಗದಿ ಮಾಡಿ ಘೋಷಣೆ ಚುನಾವಣೆ ಮಾಡಿತ್ತು.
ಈ ಚುನಾವಣೆಗೆ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ, ಮಹಾನಗರ ಪಾಲಿಕೆ ಸದಸ್ಯರುಗಳು ಮತದಾರರಾಗಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ೨೫ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬೀದರ್, ಗುಲ್ಬರ್ಗ, ಉತ್ತರ ಕನ್ನಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ತಲಾ ಒಬ್ಬ ಸದಸ್ಯರು ಆಯ್ಕೆಯಾಗಲಿದ್ದು, ಮೈಸೂರು, ಬಿಜಾಪುರ, ಬೆಳಗಾಂ, ಧಾರವಾಡ, ದಕ್ಷಿಣ ಕನ್ನಡ ಕ್ಷೇತ್ರಗಳಿಂದ ತಲಾ ಇಬ್ಬರು ಸದಸ್ಯರು ಪರಿಷತ್‌ಗೆ ಆಯ್ಕೆಯಾಗುವರು.
ಜನವರಿ ಅಂತ್ಯಕ್ಕೆ ಅವಧಿ ಅಂತ್ಯವಾಗುವ ಸದಸ್ಯರುಗಳ ಪಟ್ಟಿ ಇಂತಿದೆ.
ಬಿಜೆಪಿ: ಕೋಟಾ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ, ಎಂ.ಕೆ ಪ್ರಾಣೇಶ್ – ಚಿಕ್ಕಮಗಳೂರು, ಮಹಾಂತೇಶ್ ಕವಟಗಿ ಮಠ-ಬೆಳಗಾವಿ, ಬಿ.ಜಿ. ಪಾಟೀಲ್ – ಕಲಬುರಗಿ, ಪ್ರದೀಪ್ ಶೆಟ್ಟರ್_ಧಾರವಾಡ, ಸುನಿಲ್ ಸುಬ್ರಮಣ್ಯ-ಕೊಡಗು.

ಕಾಂಗ್ರೆಸ್: ಎಸ್.ಆರ್. ಪಾಟೀಲ್-ವಿಜಯಪುರ, ಸುನಿಲ್‌ಗೌಡ ಆರ್. ಪಾಟೀಲ್-ವಿಜಯಪುರ, ಎಂ. ನಾರಾಯಣಸ್ವಾಮಿಬೆಂಗಳೂರು, ಪ್ರತಾಪ್‌ಚಂದ್ರ ಶೆಟ್ಟಿ-ದಕ್ಷಣ ಕನ್ನಡ, ಶ್ರೀಕಾಂತ್ ಗೋಟ್ನೇಕರ್-ಉತ್ತರ ಕನ್ನಡ, ಶ್ರೀನಿವಾಸ ಮಾನೆಧಾರವಾಡ, ಧರ್ಮಸೇನಾ_ಮೈಸೂರು, ವಿಜಯಸಿಂಗ್-ಬೀದರ್, ಬಸವರಾಜ ಪಾಟೀಲ್ ಇಟಗಿ-ರಾಯಚೂರು, ಜೆ.ಸಿ ಕೊಂಡಯ್ಯ-ಬಳ್ಳಾರಿ, ಎಂ.ಎಗೋಪಾಲಸ್ವಾಮಿ-ಹಾಸನ, ಎಸ್. ರವಿ-ಬೆಂಗಳೂರು ಗ್ರಾಮಾಂತರ, ರಘುಆಚಾರ್-ಚಿತ್ರರ್ದು,

ಜೆಡಿಎಸ್: ಎನ್. ಅಪ್ಪಾಜಿ ಗೌಡ-ಮಂಡ್ಯ, ಸಂದೇಶ್ ನಾಗರಾಜ್-ಮೈಸೂರು, ಸಿ.ಆರ್ ಮನೋಹರ್-ಕೋಲಾರ, ಕಾಂತರಾಜು-ತುಮಕೂರು,

ಪಕ್ಷೇತರ: ವಿವೇಕ್‌ರಾವ್ ಪಾಟೀಲ್-ಬೆಳಗಾವಿ