ಪರಿಷತ್ ಚುನಾವಣೆ; ಜೆಡಿಎಸ್-ಬಿಜೆಪಿ ನಾಯಕರ ಸಭೆ

ಬೆಂಗಳೂರು, ಜ. ೨೧- ಮುಂಬರುವ ವಿಧಾನ ಪರಿಷತ್ತಿನ ಚುನಾವಣೆಗಳ ಬಗ್ಗೆ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ಇಂದು ಮಹತ್ವದ ಸಭೆ ನಡೆಸಿ ಸೀಟು ಹೊಂದಾಣಿಕೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ನಿವಾಸದಲ್ಲಿ ಇಂದು ಬೆಳಿಗ್ಗೆ ಬಿಜೆಪಿ ಮತ್ತು ಜೆಡಿಎಸ್‌ನ ಪ್ರಮುಖ ನಾಯಕರ ಸಭೆ ನಡೆಯಿತು.
ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಹಾಗೂ ಬರುವ ಮೇ-ಜೂನ್‌ನಲ್ಲಿ ನಡೆಯಲಿರುವ ವಿಧಾನ ಪರಿಷತ್ತಿನ ೬ ಕ್ಷೇತ್ರಗಳ ಚುನಾವಣೆ ಬಗ್ಗೆ ಸುದೀರ್ಘ ಚರ್ಚೆ ನಡೆಲಾಯಿತು.
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಾದ ಬಿಜೆಪಿ – ಜೆಡಿಎಸ್ ನಡುವಿನ ಸೀಟು ಹೊಂದಾಣಿಕೆ, ಯಾವ ಕ್ಷೇತ್ರಗಳಲ್ಲಿ ಯಾರು ಕಣಕ್ಕಿಳಿಯಬೇಕು, ಯಾರನ್ನ ಅಭ್ಯರ್ಥಿಯನ್ನಾಗಿಸಬೇಕು. ಈ ಎಲ್ಲದರ ಬಗ್ಗೆಯೂ ಚರ್ಚೆಗಳು ನಡೆದವು.
ಇಂದಿನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ, ಜಿ.ಟಿ. ದೇವೇಗೌಡ, ಬಂಡೆಪ್ಪ ಕಾಶಂಪೂರ್, ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ತಿನ ಸದಸ್ಯರಾದ ಬೋಜೇಗೌಡ, ತಿಪ್ಪೇಸ್ವಾಮಿ ಭಾಗಿಯಾಗಿದ್ದರು.
ಇಂದಿನ ಲೋಕಸಭಾ ಚುನಾವಣೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಕೇವಲ ವಿಧಾನ ಪರಿಷತ್ ಚುನಾವಣೆಯ ಸೀಟು ಹೊಂದಾಣಿ, ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆಯಷ್ಟೇ ಚರ್ಚೆ ನಡೆಸಲಾಗಿದೆ.
ಈ ಸಭೆಯಲ್ಲಿ ಬಿಜೆಪಿ ಯಾವ ಕ್ಷೇತ್ರಗಳಿಂದ ಕಣಕ್ಕಿಳಿಯಬೇಕು, ಜೆಡಿಎಸ್‌ಗೆ ಎಷ್ಟು ಸ್ಥಾನ ಬಿಟ್ಟು ಕೊಡಬೇಕು ಎಂಬೆಲ್ಲಾ ಚರ್ಚೆಗಳಾಗಿದ್ದು, ಅಂತಿಮವಾಗಿ ಬಿಜೆಪಿ ವರಿಷ್ಠರಿಗೆ ಈ ಬಗ್ಗೆ ಮಾಹಿತಿ ನೀಡಿ ಸೀಟು ಹೊಂದಾಣಿಕೆಯನ್ನು ವರಿಷ್ಠರ ನಿರ್ಧಾರಕ್ಕೆ ಬಿಡುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಲಾಗಿದೆ.
ಫೆಬ್ರವರಿಯಲ್ಲಿ ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಿ ಎಂಬ ಬೇಡಿಕೆಯನ್ನು ಜೆಡಿಎಸ್ ನಾಯಕರು ಇಟ್ಟಿದ್ದು, ಈ ಬಗ್ಗೆಯೂ ತೀರ್ಮಾನ ಕೈಗೊಳ್ಳುವುದನ್ನು ಬಿಜೆಪಿ ವರಿಷ್ಠರಿಗೆ ಬಿಡುವ ನಿರ್ಧಾರ ಕೈಗೊಳ್ಳಲಾಗಿದೆ.
ಇದರ ಜತೆಗೆ ಮುಂಬರುವ ಪದವೀಧರ ಹಾಗೂ ಶಿಕ್ಷಕರ ೬ ಕ್ಷೇತ್ರದ ಚುನಾವಣೆಯಲ್ಲೂ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿಯುವ ಬಗ್ಗೆಯೂ ಚರ್ಚೆಗಳಾಗಿದ್ದು, ಸಭೆಯಲ್ಲಿ ಎರಡು ಪಕ್ಷದ ನಾಯಕರ ನಡುವೆ ಬಹಳ ಸೌಹಾರ್ದಯುತವಾಗಿ ಚರ್ಚೆಗಳು ನಡೆದವು ಎಂದು ಹೇಳಲಾಗಿದೆ.

ಶೀಘ್ರ ಅಭ್ಯರ್ಥಿ ಘೋಷಣೆ:ಬಿವೈವಿ
ಮುಂಬರುವ ವಿಧಾನ ಪರಿಷತ್ತಿನ ಚುನಾವಣೆಯ ಬಗ್ಗೆ ಇಂದು ಬಿಜೆಪಿ ಹಾಗೂ ಜೆಡಿಎಸ್‌ನ ಪ್ರಮುಖ ನಾಯಕರು ಚರ್ಚೆ ನಡೆಸಿದ್ದು, ಆದಷ್ಟು ಬೇಗ ಅಭ್ಯರ್ಥಿಯನ್ನು ಘೋಷಣೆ ಮಾಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಸೇರಿದಂತೆ ಮುಂಬರುವ ವಿಧಾನ ಪರಿಷತ್ತಿನ ೬ ಕ್ಷೇತ್ರಗಳ ಚುನಾವಣೆಯ ಬಗ್ಗೆಯೂ ಚರ್ಚೆ ನಡೆದಿದೆ. ಈ ಸಭೆಯಲ್ಲಿ ಚರ್ಚೆಯಾಗಿರುವ ಅಂಶಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ಗಮನಕ್ಕೆ ತಂದು ಅತಿ ಶೀಘ್ರದಲ್ಲೇ ಅಭ್ಯರ್ಥಿಗಳ ಘೋಷಣೆ ಮಾಡುವಂತೆ ಮನವಿ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದರು.
ಈ ಸಭೆಯಲ್ಲಿ ಚರ್ಚೆಗಳು ಬಹಳ ಅರ್ಥಪೂರ್ಣವಾಗಿ ನಡೆದಿವೆ. ಮುಂದಿನ ದಿನಗಳಲ್ಲಿ ತಳಮಟ್ಟದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹೊಂದಿಕೊಂಡು ಹೋಗಬೇಕು. ಸದ್ಯ ಈ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಆದರೂ ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಎಲ್ಲಾ ಚುನಾವಣೆಗಳಲ್ಲೂ ಕೂಡಾ ಒಂದಾಗಿ ಒಗ್ಗಟ್ಟಾಗಿ ಎದುರಿಸುವ ಬಗ್ಗೆಯೂ ಚರ್ಚೆಗಳು ನಡೆದವು. ಒಳ್ಳೆಯ ರೀತಿಯಲ್ಲಿ ಚರ್ಚೆಗಳಾಗಿವೆ ಎಂದು ವಿಜಯೇಂದ್ರ ಹೇಳಿದರು.
ಇಂದಿನ ಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸೀಮಿತವಾಗಿ ಚರ್ಚೆ ನಡೆದಿದೆ. ಲೋಕಸಭಾ ಚುನಾವಣೆಯ ಬಗ್ಗೆ ವರಿಷ್ಠರು ಚರ್ಚೆ ನಡೆಸಿದ್ದಾರೆ. ಯಾವುದೇ ಚುನಾವಣೆಯ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಅಭ್ಯರ್ಥಿಗಳ ವಿಚಾರದಲ್ಲೂ ಗೊಂದಲ ಇಲ್ಲ. ಅವರ ಅಭಿಪ್ರಾಯಗಳನ್ನು ಜೆಡಿಎಸ್ ನಾಯಕರು ಹೇಳಿದ್ದಾರೆ. ನಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ತಿಳಿಸಿದ್ದೇವೆ. ಎಲ್ಲರ ಅಭಿಪ್ರಾಯಗಳನ್ನು ಗಮನಿಸಿ ವರಿಷ್ಠರು ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತಾರೆ ಎಂದರು.
ನಾಳೆ ರಜೆಗೆ ಆಗ್ರಹ
ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ನಾಳೆ ನಡೆಯಲಿರುವ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ವೀಕ್ಷಿಸಲು ಅನುವಾಗುವಂತೆ ರಾಜ್ಯ ಸರ್ಕಾರ ರಜೆ ಘೋಷಿಸಬೇಕು ಎಂದು ನಾವು ಈಗಾಗಲೇ ಒತ್ತಾಯಿಸಿದ್ದೇವೆ. ಈಗಲೂ ತಡವಾಗಿಲ್ಲ, ಸರ್ಕಾರ ಕೂಡಲೇ ರಜೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ವಿಜಯೇಂದ್ರ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.