ಪರಿಷತ್ ಚುನಾವಣೆ ಅಭ್ಯರ್ಥಿಗಳ ಭವಿಷ್ಯಕ್ಕೆ ಮುದ್ರೆ

ಬೆಂಗಳೂರು, ಅ. ೨೮- ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಸಿನ ಮತದಾನ ನಡೆದಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ ಹಾಗೂ ಪಶ್ವಿಮ ಪದವೀಧರ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳೂ ಸೇರಿದಂತೆ, ಕೆಲವೆಡೆ ಪಕ್ಷೇತರ ಅಭ್ಯರ್ಥಿಗಳು ಪರಿಷತ್ ಪ್ರವೇಶಿಸಲು ಇನ್ನಿಲ್ಲದ ಹರಸಾಹಸ ನಡೆಸಿದ್ದರು.
ಮೂರು ರಾಜಕೀಯ ಪಕ್ಷಗಳಿಗೆ ವಿಧಾನ ಪರಿಷತ್ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಶತಾಯ – ಗತಾಯ ಗೆಲುವು ಸಾಧಿಸುವ ಮೂಲಕ ಮೇಲ್ಮನೆಯಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮುಂದಾಗಿವೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ಪುಟ್ಟಣ್ಣ, ಕಾಂಗ್ರೆಸ್ ನ ಪ್ರವೀಣ್ ಪೀಟರ್, ಜೆಡಿಎಸ್ ನ ಎ.ಪಿ. ರಂಗನಾಥ್ ನಡುವೆ ಪೈಪೋಟಿ ಎದುರಾಗಿದೆ.
ಈಶಾಣ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶಿಲ್ ನಮೋಶಿ, ಕಾಂಗ್ರೆಸ್ ನ ಶರಣಪ್ಪ ಮಟ್ಟೂರು, ಜೆಡಿಎಸ್ ನ ತಿಮ್ಮಯ್ಯ ಪುರ್ಲೆ ನಡುವೆ ಪರಿಷತ್ ಪ್ರವೇಶಕ್ಕಾಗಿ ಭಾರೀ ಪೈಪೋಟಿ ನಡೆದಿದೆ.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಎಂ. ಚಿದಾನಂದ ಗೌಡ, ಕಾಂಗ್ರೆಸ್ ನ ರಮೇಶ್ ಬಾಬು ಹಾಗೂ ಜೆಡಿಎಸ್ ನ ಚೌಡರೆಡ್ಡಿ ತೂಪಲ್ಲಿ ನಡುವೆ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಎಸ್.ವಿ. ಸಂಕನೂರ, ಕಾಂಗ್ರೆಸ್ ನ ಡಾ. ಎಂ. ಆರ್. ಕುಬೇರಪ್ಪ ಮತ್ತು ಪಕ್ಷೇತರ ಅಭ್ಯರ್ಥಿ ಬಸವರಾಜ್ ಗುರಿಕಾರರ ನಡುವೆ ಪೈಪೋಟಿ ನಡೆದಿದೆ.
ಮುನ್ನೆಚ್ಚರಿಕೆ
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿರುವ ೫೪೯ ಮತಗಟ್ಟೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದ್ದು, ಸಂಜೆ ೫ರ ತನಕ ಮತದಾನ ನಡೆಯಲಿದೆ.
ಒಟ್ಟಾರೆ ೨,೩೪,೭೧೮ ಮತದಾರರಿದ್ದು, ಈ ಪೈಕಿ ೧,೪೨,೮೮೯ ಪುರುಷ, ೯೧,೮೦೯ ಮಹಿಳಾ ಹಾಗೂ ೨೦ ಇತರೆ ಮತದಾರರಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ೪೭,೫೮೪ ಪುರುಷ, ೨೬,೬೭೩ ಮಹಿಳಾ ಹಾಗೂ ೧೧ ಇತರೆ ಮತದಾರರಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ೬೮,೪೧೧ ಪುರುಷ, ೪೦,೭೧೨ ಮಹಿಳಾ ಹಾಗೂ ೪ ಇತರೆ ಸೇರಿ ೧,೦೯,೧೨೭ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ೧೮,೯೪೮ ಪುರುಷ, ೧೦,೨೮೪ ಮಹಿಳಾ ಹಾಗೂ ೨ ಇತರೆ ಸೇರಿ ೨೯,೨೩೪ ಮತದಾರರಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ೭,೯೪೬ ಪುರುಷ, ೧೪,೧೪೦ ಮಹಿಳಾ, ೩ ಇತರೆ ಸೇರಿ ೨೨,೦೮೯ ಮತದಾರರಿದ್ದಾರೆ.