ಪರಿಷತ್ ಚುನಾವಣೆಗೆ ಮಾದರಿ ನೀತಿ ಸಂಹಿತೆ ಅನ್ವಯ ಕ್ರಮ: ಡಿಸಿ

ತುಮಕೂರು, ನ. ೧೨- ಕರ್ನಾಟಕ ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿರುವ ಸದಸ್ಯರ ಪದಾವಧಿಯು ೨೦೨೨ರ ಜನವರಿ ೫ಕ್ಕೆ ಮುಕ್ತಾಯಗೊಳ್ಳಲಿದ್ದು, ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ತೆರವಾಗುವ ಸದಸ್ಯ ಸ್ಥಾನಕ್ಕೆ ಡಿ. ೧೦ ರಂದು ಚುನಾವಣೆ ನಡೆಸಲು ಮಾದರಿ ನೀತಿ ಸಂಹಿತೆಯಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನ ಪರಿಷತ್ ಚುನಾವಣೆ ಸಂಬಂಧ ಜರುಗಿದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆಯು ನ. ೧೧ ರಂದು ಜಾರಿಗೆ ಬಂದಿದೆ. ಈ ಮಾದರಿ ನೀತಿ ಸಂಹಿತೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ತಾಲ್ಲೂಕಿಗೆ ಒಂದರಂತೆ ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ ಎಂದರು.
ಚುನಾವಣಾ ವೇಳಾ ಪಟ್ಟಿ ಅನ್ವಯ ನ. ೧೬ ರಿಂದ ೨೩ ರವರೆಗೆ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿ ನೋಂದಣಿಯಾಗಿರುವ ಮತ್ತು ೩೦ ವರ್ಷ ಮೇಲ್ಪಟ್ಟ ಮತದಾರರು ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ನಾಮಪತ್ರಗಳ ಪರಿಶೀಲನೆ ಕಾರ್ಯ ನ. ೨೪ ರಂದು ನಡೆಯಲಿದ್ದು, ನ. ೨೬ ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ. ೧೦ ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ ೧೪ ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯು ಡಿಸೆಂಬರ್ ೧೬ ರೊಳಗೆ ಮುಕ್ತಾಯಗೊಳ್ಳಲಿದೆ ಎಂದರು.
ಸದರಿ ಚುನಾವಣೆಯು ಬ್ಯಾಲೆಟ್ ಪೇಪರ್ ಮೂಲಕ ನಡೆಯಲಿದೆ. ಪ್ರತಿಯೊಬ್ಬ ಮತದಾರನಿಗೆ ಚುನಾವಣೆಗೆ ಸ್ವರ್ಧಿಸುವ ಅಭ್ಯರ್ಥಿಗಳ ಸಂಖ್ಯೆಗೆ ಅನುಸಾರ ಪ್ರಾಶಸ್ತ್ಯ ಮತಗಳನ್ನು ದಾಖಲಿಸಲು ಅವಕಾಶವಿರುತ್ತದೆ. ಚುನಾವಣೆಗೆ ಬ್ಯಾಲೆಟ್ ಬಾಕ್ಸ್‌ಗಳನ್ನು ಬಳಸಲಾಗುವುದು (ಇವಿಎಂಗಳನ್ನು ಬಳಸುವುದಿಲ್ಲ) ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಲೋಕಸಭಾ, ವಿಧಾನಸಭಾ, ವಿಧಾನ ಪರಿಷತ್, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಸದಸ್ಯರು ಮತದಾರರಾಗಿರುತ್ತಾರೆ ಎಂದು ಹೇಳಿದರು.
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷದವರು ತಮ್ಮ ಬಿಎಲ್‌ಎ/ಪ್ರತಿನಿಧಿಗಳ ಮೂಲಕ ೮೦ ವರ್ಷ ಮೇಲ್ಪಟ್ಟ ಮತದಾರರ ಮನೆಗಳಿಗೆ ಭೇಟಿ ನೀಡಿ ಮತದಾರರು ಜೀವಂತ ಇರುವ/ವಾಸವಿರುವ ಬಗ್ಗೆ ಪರಿಶೀಲನೆ ನಡೆಸಿ ಖಾತ್ರಿಪಡಿಸಿಕೊಳ್ಳಬೇಕು. ಪರಿಶೀಲನೆ ವೇಳೆ ಮತದಾರರು ಮೃತಪಟ್ಟಿರುವುದು ಕಂಡು ಬಂದಲ್ಲಿ ಅಥವಾ ಖಾಯಂ ಸ್ಥಳಾಂತರಗೊಂಡಿದ್ದಲ್ಲಿ ಅವರ ಸಂಬಂಧಿಕರಿಂದ ನಮೂನೆ ೭ನ್ನು ಪಡೆದು ಅವರನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಮತದಾರರ ಕರಡು ಪಟ್ಟಿಯನ್ನು ನವೆಂಬರ್ ೮ ರಂದು ಎಲ್ಲಾ ಮತಗಟ್ಟೆಗಳಲ್ಲಿ ಹಾಗೂ ತಾಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಪ್ರಚುರಪಡಿಸಲಾಗಿದೆ. ಸದರಿ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ ೮ ರವರೆಗೆ ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ ೮ ರೊಳಗಾಗಿ ಸ್ವೀಕೃತವಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿಸೆಂಬರ್ ೨೭ ರೊಳಗಾಗಿ ವಿಲೇವಾರಿ ಮಾಡಿ, ೨೦೨೨ರ ಜನವರಿ ೧೩ ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗುವುದು ಎಂದು ತಿಳಿಸಿದರು.
ಮತದಾರ ಪಟ್ಟಿಗಳ ಪರಿಷ್ಕರಣೆ ಸಂಬಂಧ ಸಾರ್ವತ್ರಿಕ ರಜಾದಿನಗಳಾದ ನ. ೧೪, ೨೧ ಹಾಗೂ ೨೮ ರಂದು ವಿಶೇಷ ಆಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಿಗದಿತ ದಿನಗಳಂದು ಬಿಎಲ್‌ಒಗಳು ಮತಗಟ್ಟೆಗಳಲ್ಲಿ ಹಾಜರಿದ್ದು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿರುವ ೨೬೮೩ ಮತಗಟ್ಟೆಗಳಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ಬಿಎಲ್‌ಒಗಳ ಕಾರ್ಯಕ್ಕೆ ಎಲ್ಲಾ ರಾಜಕೀಯ ಪಕ್ಷದವರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ೧೧೧೫೨೬೦ ಪುರುಷರು, ೧೧೧೨೫೨೩ ಮಹಿಳೆಯರು ಹಾಗೂ ಇತರೆ ೧೧೨ ಸೇರಿ ಒಟ್ಟು ೨೨೨೭೮೯೫ ಮತದಾರರಿದ್ದಾರೆ. ವಿವಾಹಿತ ಹೆಣ್ಣು ಮಕ್ಕಳು ತಮ್ಮ ಹೆಸರನ್ನು ಇನ್ನೂ ತಂದೆ ಮನೆಯ ವಿಳಾಸದ ಮತದಾರರ ಪಟ್ಟಿಯಲ್ಲಿಯೇ ಉಳಿಸಿಕೊಂಡಿದ್ದು, ಅಂತಹವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮಾತನಾಡಿ, ಭಾರತ ಚುನಾವಣಾ ಆಯೋಗವು ಮತದಾರರ ಅನಕೂಲಕ್ಕಾಗಿ ಹೆಲ್ಪ್‌ಲೈನ್ ಆಪ್ ತಂತ್ರಾಂಶವನ್ನು ಬಿಡುಗಡೆಗೊಳಿಸಿದ್ದು, ಈಗಾಗಲೇ ನೋಂದಣಿಯಾಗಿರುವ ಮತದಾರರು ತಮ್ಮ ಹೆಸರು, ವಿಳಾಸ ಇತ್ಯಾದಿಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಹೊಸದಾಗಿ ನೋಂದಣಿ ಮಾಡಲು ಇಚ್ಛಿಸುವ ಯುವ/ಇತರೆ ಅರ್ಹ ಮತದಾರರು ವೋಟರ್ ಹೆಲ್ಪ್‌ಲೈನ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ರಾಜಕೀಯ ಪಕ್ಷಗಳ ಮುಖಂಡರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.