ಪರಿಷತ್ ಚುನಾವಣಾ ಪೂರ್ವಭಾವಿ ಸಭೆ: ನೀತಿ ಸಂಹಿತೆ ಜಾರಿ-ಎಡಿಸಿ

ರಾಯಚೂರು,ನ.೧೩- ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಚುನಾವಣೆ ಘೋಷಣೆಯಾಗಿದ್ದು, ಸಾರ್ವತ್ರಿಕ ಚುನಾವಣೆ ರೀತಿಯಲ್ಲಿಯೇ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್ ಹೇಳಿದರು.
ಅವರು ನ.೧೨ರ ಶುಕ್ರವಾರ ದಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀತಿ ಸಂಹಿತೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಡಿಸೆಂಬರ್ ೧೬ರ ವರೆಗೆ ಜಾರಿಯಲ್ಲಿರುತ್ತದೆ. ಮಾದರಿ ನೀತಿ ಸಂಹಿತೆ ಜನಪ್ರತಿನಿಧಿಗಳಿಗೆ ಮಾತ್ರವಲ್ಲದೆ ಅಧಿಕಾರಿಗಳು ಸೇರಿ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ನೀತಿ ಸಂಹಿತೆ ಉಲ್ಲಂಘಿಸದಂತೆ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು. ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಅಧಿಕಾರಿಗಳ ತಂಡ ರಚಿಸಲಾಗುವುದು ಎಂದರು.
ನ.೧೬ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ನ.೨೩ರವರೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನ. ನ.೨೪ರಂದು ನಾಮಪತ್ರ ಪರಿಶೀಲನೆ, ನ.೨೬ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನ. ಡಿ.೧೦ರಂದು ಬೆಳಿಗ್ಗೆ ೮ರಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ. ಡಿ೧೪ರಂದು ಮತಗಳ ಎಣಿಕೆ ನಡೆಯಲಿದ್ದು, ಡಿ೧೬ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಹೇಳಿದರು.
ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಮತ ದಾನದ ಹಕ್ಕು ಹೊಂದಿರುತ್ತಾರೆ. ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯ ಮುಗಿದ ತಕ್ಷಣ ಅರ್ಹ ಮತದಾರರ ಅಂತಿಮ ವಿವರಗಳನ್ನು ಸಲ್ಲಿಸಲಾಗುವುದು. ಮಾದರಿ ನೀತಿ ಸಂಹಿತೆ ಜನಪ್ರತಿನಿಧಿಗಳಿಗೆ ಮಾತ್ರವಲ್ಲದೆ ಅಧಿಕಾರಿಗಳಿಗೂ ಅನ್ವಯವಾಗುತ್ತದೆ ಎಂದರು.
ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಪುರಸಭೆ ಕಚೇರಿಗಳಲ್ಲಿ ಮತಗಟ್ಟೆ ಸ್ಥಾಪಿಸಲಾಗುವುದು. ಈ ಬಾರಿ ಒಟ್ಟು ೩೩೯ಮತಗಟ್ಟೆ ಸ್ಥಾಪಿಸಲಾಗುತ್ತಿದ್ದು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಸದಸ್ಯರು ಸೇರಿ ೬೫೦೩ ಮತದಾರರು ಇದ್ದಾರೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಅವಧಿ ಮುಕ್ತಾಯಗೊಂಡಿರುವುದರಿಂದ ಮತ ಚಲಾಯಿಸಲು ಅವಕಾಶವಿಲ್ಲ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಚುನಾವಣಾ ಶಿರಸ್ತದಾರ ಜಾಕೀರ್ ಪಟೇಲ್ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಸಭೆಯಲ್ಲಿ ಇದ್ದರು.