ಪರಿಷತ್ ಕದನ: ಅಭ್ಯರ್ಥಿಗಳ ಕಡೆ ಕಸರತ್ತು

ಬೆಂಗಳೂರು,ಡಿ.೮- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ೨೫ ಸ್ಥಾನಗಳಿಗೆ ಶುಕ್ರವಾರ (ಡಿ.೧೦) ನಡೆಯುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಿನ್ನೆ ಸಂಜೆ ತೆರೆ ಬಿದ್ದಿದ್ದು, ಇಂದು ಅಭ್ಯರ್ಥಿಗಳು ಕೊನೇ ಘಳಿಗೆಯಲ್ಲಿ ಮನೆ ಮನೆ ಪ್ರಚಾರ ನಡೆಸಿ ಮತದಾರರ ಮನಗೆಲ್ಲುವ ಕಸರತ್ತು ನಡೆಸಿದ್ದಾರೆ.
ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿರುವುದರಿಂದ ಅಭ್ಯರ್ಥಿಗಳು ಈಗ ಸದ್ದಿಲ್ಲದೆ ಮತದಾರರನ್ನು ಓಲೈಸುವ ಕೆಲಸ ನಡೆಸಿದ್ದು, ಅಭ್ಯರ್ಥಿಗಳು ಪ್ರತಿ ಮತದಾರರ ಮನೆಗೆ ತೆರಳಿ ಮತಯಾಚಿಸಿದ್ದಾರೆ.
ವಿಧಾನ ಪರಿಷತ್‌ನ ೨೦ ಕ್ಷೇತ್ರಗಳ ೨೫ ಸ್ಥಾನಗಳಿಗೆ ಸ್ಥಳಿಯ ಸಂಸ್ಥೆಗಳಿಂದ ಈ ಚುನಾವಣೆ ಶುಕ್ರವಾರ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಗೆಲುವಿಗಾಗಿ ಪೈಪೋಟಿಯೇ ನಡೆದಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ೨೦ ಕ್ಷೇತ್ರಗಳಲ್ಲಿ, ಜೆಡಿಎಸ್ ೬ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಈ ಚುನಾವಣೆಯಲ್ಲಿ ಒಟ್ಟಾರೆ ೯೦ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಳೆದ ೧೦ ದಿನಗಳಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರುಗಳು ಎಲ್ಲ ಕ್ಷೇತ್ರಗಳಲ್ಲೂ ಅಬ್ಬರದ ಪ್ರಚಾರ ನಡೆಸಿದ್ದರು.
ಜೆಡಿಎಸ್ ಸ್ಪರ್ಧಿಸಿರುವ ೬ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಉಳಿದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬೆಳಗಾವಿ ಮತ್ತು ಧಾರವಾಡ ಕ್ಷೇತ್ರಗಳಲ್ಲಿ ಪಕ್ಷೇತರರು ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದ್ದು, ಈ ಕ್ಷೇತ್ರಗಳ ಚುನಾವಣಾ ಫಲಿತಾಂಶ ಕುತೂಹಲ ಮೂಡಿಸಿದೆ.
ವಿಧಾನ ಪರಿಷತ್‌ನ ಚುನಾವಣೆಗಳ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮತದಾನಕ್ಕೆ ೬೦೭೨ ಮತಗಟ್ಟೆಗಳನ್ನು ಸ್ಥಾಪಿಸಿದೆ.
ಮತದಾನ ಡಿ. ೧೦ ರಂದು ಬೆಳಿಗ್ಗೆ ೮ ರಿಂದ ಸಂಜೆ ೪ರ ವರೆಗೆ ನಡೆಯಲಿದೆ. ಮತ ಎಣಿಕೆ ಡಿ. ೧೪ ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.