ಪರಿಷತ್‌ನ ೧ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ

ಬೆಂಗಳೂರು,ಜು.೨೯- ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಅ. ೧೧ ರಂದು ನಡೆಯಲಿರುವ ಚುನಾವಣೆಗೆ ಟಿಕೆಟ್ ಗಿಟ್ಟಿಸಲು ಬಿಜೆಪಿಯಲ್ಲಿ ಭಾರಿ ಪೈಪೋಟಿ ನಡೆದಿದ್ದು, ಬಿಜೆಪಿ ವಕ್ತಾರ ಎಸ್. ಪ್ರಕಾಶ್, ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಮೋಹನ್‌ಲಿಂಬಿಕಾಯಿ, ಮಹಂತೇಂಶ ಕವತಗಿ ಮಠ, ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಭಾರತಿ ಮುಗ್ದುಂ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಸೇರಿದಂತೆ ಹಲವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಜೆಡಿಎಸ್‌ನ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಆ. ೧ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದರೂ ಇನ್ನೂ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ
ಈ ಒಂದು ಸ್ಥಾನಕ್ಕೆ ಹಲವಾರು ಆಕಾಂಕ್ಷಿಗಳಿರುವುದು ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಯಾರನ್ನೂ ಆಯ್ಕೆ ಮಾಡಬೇಕು ಎಂಬ ಬಗ್ಗೆ ಪಕ್ಷದ ನಾಯಕರುಗಳು ಚರ್ಚೆ ನಡೆಸಿದ್ದು, ಇನ್ನೆರೆಡು ದಿನಗಳಲ್ಲಿ ಅಭ್ಯರ್ಥಿಯ ಆಯ್ಕೆ ಅಂತಿಮಗೊಳ್ಳಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.ಈ ಉಪ ಚುನಾವಣೆಯಲ್ಲಿ ಬಿಜೆಪಿ ವಕ್ತಾರ ಹಾಗೂ ಮಾಜಿ ಮಾಧ್ಯಮ ಮುಖ್ಯಸ್ಥರಾದ ಎಸ್. ಪ್ರಕಾಶ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದು, ಈಗಾಗಲೇ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರುಗಳಾದ ಅಶೋಕ್, ಈಶ್ವರಪ್ಪ, ಡಾ. ಸಿ.ಎನ್ ಅಶ್ವತ್ಥ ನಾರಾಯಣ ಸೇರಿದಂತೆ ಪಕ್ಷ ಹಾಗೂ ಸಂಘದ ಹಲವು ಮುಖಂಡರುಗಳನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಪಕ್ಷದ ಸಂಘಟನೆಯಲ್ಲಿ ೩೦ ವರ್ಷಗಳಿಗೂ ಹೆಚ್ಚು ದುಡಿದಿರುವ ಎಸ್. ಪ್ರಕಾಶ್‌ಗೆ ಟಿಕೆಟ್ ನೀಡುವಂತೆ ಬೆಂಗಳೂರಿನ ಹಲವು ಸಚಿವರು, ಶಾಸಕರೂ ಸಹ ಒತ್ತಡ ಹೇರಿದ್ದಾರೆ. ಈ ಎಲ್ಲದರ ನಡುವೆ ಶಿಕ್ಷಕರ ಕ್ಷೇತ್ರದಿಂದ ಬಸವರಾಜ ಹೊರಟ್ಟಿರವರು ಸ್ಪರ್ಧಿಸಿದ್ದರಿಂದ ಟಿಕೆಟ್ ವಂಚಿತರಾಗಿದ್ದ ಮೋಹನ್ ಲಿಂಬಿಕಾಯಿ ಅವರು ಅಭ್ಯರ್ಥಿಯಾಗಲು ಭಾರಿ ಪ್ರಯತ್ನ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಮೂಲಕ ಮೋಹನ್ ಲಿಂಬಿಕಾಯಿ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಿದ್ದಾರೆ.
ಈ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರರವರ ಆಪ್ತ ವಲಯದಲ್ಲಿರುವ ಜಗದೀಶ್ ಹೀರೇಮನಿ ಸಹ ಲಾಬಿ ನಡೆಸಿದ್ದು, ಇದರ ಜತೆಗೆ ಮಹಿಳಾ ಮುಖಂಡರುಗಳಾದ ಭಾರತಿ ಮುಗ್ದುಂ, ಮಂಜುಳಾ ಸಹ ತಮ್ಮ ಗಾಢ್‌ಫಾದರ್‌ಗಳ ಮೂಲಕ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.ರಾಜ್ಯ ಬಿಜೆಪಿ ನಾಯಕರು ಒಂದು ಸ್ಥಾನಕ್ಕೆ ೨-೩ ನಾಯಕರ ಹೆಸರುಗಳನ್ನು ಕೇಂದ್ರ ನಾಯಕರುಗಳಿಗೆ ಶಿಫಾರಸ್ಸು ಮಾಡಲಿದ್ದು, ಕೇಂದ್ರ ನಾಯಕರುಗಳು ಇನ್ನು ೨-೩ ದಿನಗಳಲ್ಲಿ ಅಭ್ಯರ್ಥಿ ಆಯ್ಕೆಯನ್ನು ಪ್ರಕಟಿಸಲಿದ್ದಾರೆ.