ಪರಿಷತ್‌ನಲ್ಲಿ ಗೋಹತ್ಯೆ ನಿಷೇಧದ ಪ್ರತಿಧ್ವನಿ ಬಿಜೆಪಿ ಧರಣಿ

ಬೆಂಗಳೂರು, ಜು. ೫- ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ-೨೦೨೦ ರದ್ದುಪಡಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿದು ಧರಣಿ ನಡೆಸಿ ಗದ್ದಲ ನಡೆಸಿದ್ದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾದ ಘಟನೆ ವಿಧಾನಪರಿಷತ್‌ನಲ್ಲಿಂದು ನಡೆಯಿತು.
ಪ್ರಶ್ನೋತ್ತರ ಅವಧಿಯಲ್ಲಿ ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ. ವೆಂಕಟೇಶ್, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-೨೦೨೦ನ್ನು ರದ್ದುಪಡಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವರ ಉತ್ತರದಿಂದ ತೃಪ್ತರಾಗದ ಸದಸ್ಯ ರವಿಕುಮಾರ್, ಕೋಟಾಶ್ರೀನಿವಾಸಪೂಜಾರಿ ಸೇರಿದಂತೆ ಮತ್ತಿತರ ಬಿಜೆಪಿ ಸದಸ್ಯರು, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವುದಿಲ್ಲ ಎನ್ನುವುದಾದರೆ ರಾಜ್ಯದಲ್ಲಿ ಇತ್ತೀಚೆಗೆ ಹಲವು ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ಏಕೆ ಕ್ರಮ ಕೈಗೊಳ್ಳಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದಿರುವ ಕಾಯ್ದೆಯನ್ನು ಹಿಂಪಡೆಯುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿ ಎಂದು ಬಿಗಿಪಟ್ಟು ಹಿಡಿದರು.
ಆಗ ಮಧ್ಯ ಪ್ರವೇಶಿಸಿದ ಸಚಿವ ವೆಂಕಟೇಶ್, ಈ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದರೂ ಅದೇ ಪ್ರಶ್ನೆಯನ್ನು ಮತ್ತೆ ಕೇಳುತ್ತಿದ್ದೀರಿ ಎಂದು ಹೇಳಿದರು.
ವೆಂಕಟೇಶ್ ಅವರ ಹೇಳಿಕೆಗೆ ಪೂರಕವಾಗಿ ಸಚಿವರಾದ ಕೃಷ್ಣಬೈರೇಗೌಡ, ಡಾ. ಎಂ.ಕೆ. ಸುಧಾಕರ್, ಆರ್. ಬಿ. ತಿಮ್ಮಾಪುರ ಮತ್ತಿತರ ಆಡಳಿತ ಪಕ್ಷದ ಸದಸ್ಯರು, ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗಿದೆ. ಆದರೂ ಬಿಜೆಪಿ ಸದಸ್ಯರು ವ್ರತಾ ಕಾಲಹರಣ ಮಾಡಲು ಅನಗತ್ಯವಾಗಿ ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಂತದಲ್ಲಿ ಪ್ರಶ್ನೆ ಕೇಳಿದ್ದ ರವಿಕುಮಾರ್ ಸೇರಿದಂತೆ ಬಿಜೆಪಿ ಸದಸ್ಯರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸುವುದಿಲ್ಲ ಎನ್ನುವುದನ್ನು ಸದನಕ್ಕೆ ಸ್ಪಷ್ಟಪಡಿಸಿ ಎಂದು ಪಟ್ಟು ಹಿಡಿದರು.
ಆಗ ಮಧ್ಯ ಪ್ರವೇಶಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಭಾರತ ಗೋ ಮಾಂಸ ರಫ್ತಿನಲ್ಲಿ ವಿಶ್ವದಲ್ಲೇ ೨ನೇ ಸ್ಥಾನದಲ್ಲಿದೆ. ಪ್ರತಿವರ್ಷ ೨೬ ಸಾವಿರ ಟನ್‌ಗೂ ಅಧಿಕ ಗೋಮಾಂಸ ರಫ್ತಾಗುತ್ತಿದೆ. ಮೊದಲು ಇದನ್ನು ನಿಲ್ಲಿಸಿ ಎಂದು ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ನಡೆಯಿತು.
ಸಭಾಪತಿ ಬಸವರಾಜಹೊರಟ್ಟಿ ಮಧ್ಯ ಪ್ರವೇಶಿಸಿ ಸದಸ್ಯರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ಕೊಟ್ಟಿದ್ದಾರೆ. ಹೀಗಿದ್ದರೂ ಪದೇ ಪದೇ ಅದೇ ವಿಷಯವನ್ನು ಯಾಕೆ ಪ್ರಸ್ತಾಪ ಮಾಡುತ್ತೀರಿ ಎಂದು ಬಿಜೆಪಿ ಸದಸ್ಯರಿಗೆ ಸಲಹೆ ನೀಡಿದರು.
ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯ ಯು.ಬಿ. ವೆಂಕಟೇಶ್, ಪ್ರತಿಪಕ್ಷ ಬಿಜೆಪಿ ಸದಸ್ಯರ ನಡೆಯನ್ನು ಆಕ್ಷೇಪಿಸಿದರು,
ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ
ಹೊರಟ್ಟಿ, ನೀವ್ಯಾಕ್ರೀ ಎದ್ದು ನಿಲ್ಲುತ್ತೀರಿ. ನನ್ನ ಕೆಲಸವನ್ನು ನಾನು ಮಾಡುತ್ತೇನೆ. ಸ್ಕೂಲ್ ಮಕ್ಕಳ ತಹ ಆಡ್ತಾ ಇದ್ದೀರಾ. ಪದೇ ಪದೇ ಈ ರೀತಿ ವರ್ತಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಚಿವ ವೆಂಕಟೇಶ್ ಅವರನ್ನು ಆಹ್ವಾನಿಸಿ ರಾಜ್ಯದಲ್ಲಿ ಎಲ್ಲೆಲ್ಲಿ ಪ್ರಾಣಿಗಳ ಹತ್ಯೆಯಾಗಿದೆ ಎನ್ನುವ ಬಗ್ಗೆ ದೂರು ಬಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿ ಸೂಚಿಸಿದರು.
ಅದರಂತೆ ಸಚಿವ ವೆಂಕಟೇಶ್, ಪರಿಶೀಲಿಸುವುದಾಗಿ ಭರವಸೆ ನೀಡಿದರು . ಆದರೂ ಬಿಜೆಪಿ ಸದಸ್ಯರು ಸದನದ ಬಾವಿಯಲ್ಲಿ ಧರಣಿ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರ ಧರಣಿ, ಪ್ರತಿಭಟನೆ ನಡೆವೆಯೇ ಸಭಾಪತಿ ಬಸವರಾಜಹೊರಟ್ಟಿ ಬೇರೆ ಕಲಾಪವನ್ನು ಕೈಗೆತ್ತಿಕೊಂಡರು.