ಪರಿಶ್ರಮದಿಂದ ಮಾತ್ರ ಪ್ರತಿಫಲ ಸಾಧ್ಯ: ಶಿವಣ್ಣವರ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಆ7: ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಛಲ, ಆಸಕ್ತಿಯೊಂದಿಗೆ ನಿಖರ ಗುರಿಗೆ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಪರಿಶ್ರಮ ಹಾಕಿದರೆ ಮಾತ್ರ ತಕ್ಕ ಪ್ರತಿಫಲ ದೊರೆಯುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಮಲ್ಲೂರು ಗ್ರಾಮದ ಶ್ರೀವೀರಭದ್ರೇಶ್ವರ ಸಮುದಾಯ ಭವನದಲ್ಲಿ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತರಗತಿಯಲ್ಲಿ ದೈಹಿಕವಾಗಿ ಕುಳಿತರೆ ಸಾಲದು ಮನಸ್ಸು ಹೊರ ಹೊಗದಂತೆ ಎಚ್ಚರ ವಹಿಸಬೇಕು. ಪಾಠ ಕೇಳುವ ಶ್ರದ್ಧೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಅರ್ಧಂಬರ್ಧ ಓದಿದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಶ್ರಮವಹಿಸಿ ಓದಿ ಸಾಧನೆ ಮಾಡುವ ಮೂಲಕ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ. ನಾವು ಅಪೇಕ್ಷೆ ಪಟ್ಟಂತ ಫಲಿತಾಂಶವನ್ನು ಪಡೆಯಲು ಶ್ರದ್ಧೆಯಿಂದ ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿದೆ. ಪ್ರತಿಭೆ ಎಲ್ಲರಲ್ಲೂ ಇದ್ದರೂ ಸಹ ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ. ಇವೆರಡರ ನಡುವೆ ಸಾಮಾಜಿಕ ಜವಾಬ್ದಾರಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಮಾತ್ರ ಯಶಸ್ಸು ನಿಶ್ಚಿತ ಎಂದರಲ್ಲದೇ ಅತ್ಯಧಿಕ ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಸಮಾಜಕ್ಕೆ ಕೀರ್ತಿ ತಂದ ಎಲ್ಲ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ಹರಿಹರದ ಪಂಚಮಸಾಲಿ ಪೀಠದ ಶ್ರೀಜಗದ್ಗುರು ವಚನಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗೌರವಿಸಿ ಸನ್ಮಾನಿಸುವ ಮೂಲಕ ಪುರಸ್ಕರಿಸಲಾಯಿತು. ಹಿರಿಯ ನ್ಯಾಯವಾದಿ ಎಸ್.ವಿ.ಪಾಟೀಲ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ತಿರಕಪ್ಪ ಮರಬಸಣ್ಣನವರ ವಹಿಸಿದ್ದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ದಾನಪ್ಪ ಚೂರಿ, ಸಮಾಜದ ಮುಖಂಡರಾದ ನಾಗೇಂದ್ರ ಕಟಗೋಳ, ಜಯದೇವ ಶಿರೂರ, ಬಸವರಾಜ ಕಡೇಕೊಪ್ಪ, ನಾಗನಗೌಡ ಪಾಟೀಲ, ಶೇಖರಗೌಡ ಗೌಡ್ರ, ಶಂಕರಗೌಡ ಪಾಟೀಲ, ಡಿ.ಎಚ್.ಬುಡ್ಡನಗೌಡ್ರ, ಜ್ಯೋತಿ ಕುದರಿಹಾಳ, ಶಿವಣ್ಣ ಹರಮಗಟ್ಟಿ, ಚನಬಸಪ್ಪ ಬೂದಿಹಾಳ, ದಯಾನಂದ ಉಳ್ಳಾಗಡ್ಡಿ, ಶಿವಯೋಗಿ ಗಡಾದ, ಶಿವನಗೌಡ ವೀರನಗೌಡ್ರ, ಬೀರಪ್ಪ ಬಣಕಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.