ಪರಿಶುದ್ಧ- ಪಾರದರ್ಶಕ ಆಡಳಿತ ನೀಡುವುದು ಕಾಂಗ್ರೆಸ್ ಉದ್ದೇಶ; ಡಿ. ಕೆ. ಶಿವಕುಮಾರ್

ದಾವಣಗೆರೆ: ಕಾಂಗ್ರೆಸ್ ಯಾವಾಗಲೂ ವ್ಯಕ್ತಿ ಪೂಜೆ ಮಾಡಲ್ಲ. ಪಕ್ಷ ಪೂಜೆ ಮಾಡುತ್ತದೆ. ತಾಳ್ಮೆಯಿಂದ ಕೆಲಸ ಮಾಡಿ ಅಧಿಕಾರಕ್ಕೆ ತನ್ನಿ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 135 ರಿಂದ 140 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹೈಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಿದ್ದ ಜನಧ್ವನಿ ಯಾತ್ರೆಯ ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಬೇರೆ ಬೇರೆ ಅವಕಾಶ ಸಿಗುತ್ತದೆ. ತಾಳ್ಮೆಯಿಂದ ಕಾಯಬೇಕು. ಮುಂದೆ ನಿಗಮ ಮಂಡಳಿ, ಎಂಪಿ, ಎಂಎಲ್ ಸಿ ಸೇರಿದಂತೆ ಬೇರೆ ಬೇರೆ ಅಧಿಕಾರ ಸಿಗುತ್ತೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸಿ ಎಂದು ಕರೆ ನೀಡಿದರು‌.

2018ರಲ್ಲಿ ಕಾಂಗ್ರೆಸ್- ಜೆಡಿಎಸ್ ಸೇರಿ ಅಧಿಕಾರ ಮಾಡಿದೆವು. ಆಪರೇಷನ್ ಕ‌ಮಲ ಮಾಡಿ ಅಧಿಕಾರಕ್ಕೆ ಬಿಜೆಪಿ ಬಂತು. ದಾವಣಗೆರೆಯ ಬಿಜೆಪಿ ಶಾಸಕರೊಬ್ಬರನ್ನು ಮಂತ್ರಿ ಮಾಡಲಿಲ್ಲ. ಇಲ್ಲಿ ನಾಯಕತ್ವಕ್ಕೆ ಬೆಲೆ ಇಲ್ಲ, ಅಭಿವೃದ್ಧಿ ಬೇಕಿಲ್ಲ ಎಂಬುದಕ್ಕೆ ಸಾಕ್ಷಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು‌.

ನಾವು ಬರುವಾಗ ಮೂರು ಕಡೆಗಳಲ್ಲಿ ವಾಹನ ತಡೆದಿರಿ. ವಾಹನ ನಿಲ್ಲಿಸಿದ್ರಿ.200-300 ಬೆಂಬಲಿಗರ ತೋರಿಸಿದರೆ ನಾವು ಜಗ್ಗುವುದಿಲ್ಲ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಎಂದು ಹೇಳಿದರು.

ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ‌. ಸಿದ್ದರಾಮಯ್ಯ, ನನಗೆ, ಶಾಮನೂರು ಶಿವಶಂಕರಪ್ಪ ಅವರಿಗೆ ಲಂಚ ಕೊಟ್ಟಿದ್ದೀರಾ. ಪರಿಶುದ್ಧ ಆಡಳಿತ ನೀಡಿದ್ದೇವೆ. ಲಂಚ ಇಲ್ಲದೇ ಬಿಜೆಪಿ ಸರ್ಕಾರದಲ್ಲಿ ಕೆಲಸ ಆಗಲ್ಲ. ನೊಟೀಸ್ ಗೆ ಪ್ರಿಯಾಂಕಾ ಖರ್ಗೆ ಹೆದರುತ್ತಾರಾ. ಯಾವುದೇ ಕಾರಣಕ್ಕೂ ಭಯಪಡಬೇಕಿಲ್ಲ. ಮುರುಗೇಶ್ ನಿರಾಣಿ ಪಿಂಪ್ ಅಂತಾ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದರೆ, ನಿರಾಣಿ ಮಾಧ್ಯಮದವರ ಜೊತೆ ಮಾತನಾಡುವಾಗ ಮಂತ್ರಿ ನಿರಾಣಿ ಅವರು, ಮರ್ಡರ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸುಮಟೋ ಕೇಸ್ ಹಾಕಿ ತನಿಖೆ ನಡೆಸಿ‌. ಲಂಚಕ್ಕೊಬ್ಬ, ಮಂಚಕ್ಕೊಬ್ಬ ಇದ್ದವರಿಗೆ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಛೇಡಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದರೂ, ಯಾಕೆ ಇಲ್ಲಿನವರನ್ನು ಮಂತ್ರಿ‌ ಮಾಡಲಿಲ್ಲ. ಅಭಿವೃದ್ಧಿ ಇವನ್ನೆಲ್ಲ ದಿಂದ ಆಗುತ್ತೆ. ಬಿಜೆಪಿ ನಾಯಕರ ಮನೆ ಸ್ಮಾರ್ಟ್ ಆಗುತ್ತಿವೆ. ಆದ್ರೆ, ನಗರ ಮಾತ್ರ ಧೂಳು ಮಾತ್ರ ಇದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕ್ಷೇತ್ರದಲ್ಲಿ ಬೇಟೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಆದ್ರೆ, ರಾಜ್ಯದಲ್ಲಿ 110 ಸ್ಥಾನ ಬಿಜೆಪಿ ದಾಟಿಲ್ಲ, ಮುಂದೆನೂ ದಾಟಲ್ಲ ಎಂದು ಭವಿಷ್ಯ ನುಡಿದ ಅವರು, ದೇಶದಲ್ಲಿ ದಾವಣಗೆರೆ ತುಂಬಾ‌ ಮುಂಚೂಣಿಯಲ್ಲಿದೆ. 70 ವರ್ಷ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಸುಳ್ಳಿನ ಸರದಾರ ಮಾಡ್ತಾರೆ. 11 ವಿಶ್ವವಿದ್ಯಾಲಯಗಳು ರಾಜ್ಯದಲ್ಲಿವೆ. ಇವುಗಳನ್ನು ಯಾರು ಮಾಡಿದ್ದು. ಬಿಜೆಪಿ ಸುಳ್ಳಿನ ಸರದಾರ. ತ್ರಿವರ್ಣ ಧ್ವಜಕ್ಕಾಗಿ ಎಷ್ಟೋ ಜನರು ಜೈಲಿಗೆ ಹೋಗಿದ್ದಾರೆ. ಪ್ರಾಣ ತೆತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜಕ್ಕೆ ಪ್ರಧಾ‌ನಿ ನರೇಂದ್ರ ಮೋದಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿರುವುದು ನಾನು ಹಾಗೂ ಎಸ್‌. ಎಸ್‌. ಮಲ್ಲಿಕಾರ್ಜುನ್. ಬಿಜೆಪಿ ಕಿತ್ತೊಗೆಯುವ ಕೆಲಸ ಮಾಡಬೇಕು. ನಾವು ಮಾಡಿರುವ ಕೆಲಸವನ್ನು ಬಿಜೆಪಿಯವರು ತಾವು ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದು, ಅವರಿಗೆ ನಾಚಿಕೆ ಆಗಬೇಕು ಎಂದು ಹೇಳಿದರು.

ಜಲಸಿರಿ ಯೋಜನೆಗೆ 150 ಕೋಟಿ ರೂಪಾಯಿ ಮಾತ್ರ ಸರ್ಕಾರ ಕೊಟ್ಟಿತ್ತು. ಆದ್ರೆ ಮಲ್ಲಿಕಾರ್ಜುನ್ 250 ಕೋಟಿ ರೂಪಾಯಿಗೆ ಹೆಚ್ಚಿಸಿ ಮಂಜೂರು ಮಾಡಿಸಿದವರು.
ಜಾನುವಾರು ಜಾತ್ರೆಗೆ 9 ಕೋಟಿ, ರಿಂಗ್ ರೋಡ್, ಹಳೇ ಬಸ್ ನಿಲ್ದಾಣ, ತರಕಾರಿ ಕಟ್ಟಡ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ ಎಂದರು.

ಬಿಜೆಪಿಯವರು ಶೇ. 40ರಷ್ಟು ಕಮೀಷನ್ ಅಷ್ಟೇ ಅಲ್ಲ, ಇನ್ನೂ ಹೆಚ್ಚಿನ ಕಮೀಷನ್ ಪಡೆಯುತ್ತಿದ್ದಾರೆ ಎಂದೆನಿಸುತ್ತಿದೆ. ಭ್ರಷ್ಟ ಬಿಜೆಪಿ ಕಿತ್ತು ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ಮತ್ತೆ ಬರುವಂತಾಗಬೇಕು. ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದು, ಯಾರಿಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ಶ್ರಮಿಸಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಮಯೂರ್ ಜಯಕುಮಾರ್, ಅಲ್ಲಂ ವೀರಭದ್ರಪ್ಪ, ಶಾಸಕರಾದ ಎಸ್. ರಾಮಪ್ಪ, ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ಹೆಚ್. ಆಂಜನೇಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ, ಮೊಹಮ್ಮದ್ ನಲಪ್ಪಾಡ್, ಜಿಲ್ಲಾ ಘಟಕದ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಹಾಜರಿದ್ದರು.