ಪರಿಶುದ್ಧ ಪರಿಸರ ಪ್ರತಿಯೊಬ್ಬರ ಹೊಣೆ : ಹಾರಕೂಡ ಶ್ರೀ

Oplus_131072

ಬೀದರ್:ಜೂ.6: ಪರಿಶುದ್ಧವಾದ ಪರಿಸರ ಪ್ರತಿ ನಾಗರಿಕನ ಹೊಣೆಯಾಗಿದೆ.
ಪರಿಸರ ಪಾವಿತ್ರ್ಯತೆ, ಘನತೆಯ ಬಗ್ಗೆ ಪ್ರತಿಯೊಬ್ಬರೂ ಆಳವಾಗಿ, ಗಂಭೀರವಾಗಿ ಪರಿಗಣಿಸಿ ಆ ನಿಟ್ಟಿನಲ್ಲಿ ಕಾರ್ಯ ಪ್ರವರ್ತರಾಗುವುದು ಅನಿವಾರ್ಯವಾಗಿದೆ ಎಂದು ಹಾರಕೂಡದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯ ಸಾನಿಧ್ಯ ವಹಿಸಿದ ಶ್ರೀಗಳು ಪ್ರಕೃತಿ ಮಾನವ ಬದುಕಿನ ಅವಿಭಾಜ್ಯ ಅಂಗವಾಗಿದೆ.
ಮಾನವನ ನೆರವು ಇಲ್ಲದೆ ಮರ ಗಿಡಗಳು ಬದುಕಬಹುದು, ಆದರೆ ಮರ ಗಿಡಗಳ ಸಹಾಯವಿಲ್ಲದೆ ಮನುಷ್ಯ ಬದುಕಲಾರ.
ಹೇರಳವಾದ ಅರಣ್ಯ ಸಂಪತ್ತು, ಒಂದು ದೇಶದ ನಾಗರಿಕ ಸಮಾಜದ ಮೂಲ ಸಂಪನ್ಮೂಲವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ನೆಲ, ಜಲ, ವಾಯುಮಲಿನವಾಗದಂತೆ ಪ್ರತಿಯೊಬ್ಬರೂ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
ಅಭಿವೃದ್ಧಿಯ ನೆಪದಲ್ಲಿ ಪರಿಸರಕ್ಕೆ ಕೊಡಲಿ ಪೆಟ್ಟು ಹಾಕುವುದು ಪ್ರಜ್ಞಾವಂತ ಸಮಾಜಕ್ಕೆ ಶೋಭೆ ತರುವಂತಹದಲ್ಲ.
ಪರಿಸರ ದಿನಾಚರಣೆ ಕೇವಲ ವರ್ಷಕ್ಕೊಂದು ದಿನ ಆಚರಿಸಿದರೆ ಸಾಲದು, ಪರಿಸರವೇ ನಮ್ಮ ಬದುಕಾಗಬೇಕು.
ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿ, ಹಳ್ಳ, ಕೊಳ್ಳ, ನದಿ, ಸರೋವರ ಹೀಗೆ ಎಲ್ಲವೂ ಸಮೃದ್ಧವಾಗಿದ್ದರೆ ಮಾತ್ರ ಪ್ರಬುದ್ಧ ದೇಶ ಕಟ್ಟಲು ಸಾಧ್ಯವಾಗುತ್ತದೆ.
ಪರಿಸರ ಸಂರಕ್ಷಣೆ ನಮ್ಮ ದೈನಂದಿನ ವ್ರತವಾಗಬೇಕು ಎಂದು ನುಡಿದರು.
ಪರಿಸರವಾದಿ ಶೈಲೇಂದ್ರ ಕಾವಡಿ ಮಾತನಾಡಿ ಪರಿಸರ ಸಮತೋಲನದಿಂದ ಭೂಮಿಯ ತಾಪಮಾನ ಹೆಚ್ಚಳವಾಗಿ ಹಲವಾರು ಪ್ರಕೃತಿ ವಿಕೋಪಗಳು ಸಂಭವಿಸಲಾರಂಭಿಸಿವೆ.
ಭೂಮಿಯ ತಾಪಮಾನ ಕಡಿಮೆಮಾಡಲು ಅತ್ಯಾಧಿಕ ಪ್ರಮಾಣದಲ್ಲಿ ಮರಗಿಡ ಬೆಳೆಸ ಬೇಕೆಂದು ಕರೆ ನೀಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಮಾತೃಶ್ರೀ ಸರಸ್ವತಿ ಕಾವಡಿ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ ಆಡಳಿತ ಅಧಿಕಾರಿ ಐ. ಜಿ ಮಠಪತಿ, ಪ್ರಾಧ್ಯಾಪಕ ಪರಮೇಶ್ವರ ಹೊಳಕುಂದೆ, ಅಲ್ಲಮ ಪ್ರಭು ಹಿರೇಮಠ, ಶಿಕ್ಷಕರಾದ ಭೀಮಶ ಯೋಜನ, ಪಂಡಿತ ಬಿರಾದಾರ, ಶೋಭಾ ಕೊಹಿನೂರ ಮುಖಂಡರಾದ ನಾಗೇಶ ಮಹಾಜನ, ನಾಗಣ್ಣ ಪಿರಜೆ, ವಿಠಲ ಹೂಗಾರ, ಚನ್ನಬಸಪ್ಪ ಕನಕಪುರ ಮುಂತಾದವರು ಉಪಸ್ಥಿತರಿದ್ದರು.
ಅಸ್ಲಾಮಿಯ ಚಿಟಗುಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಲ್ಲಿನಾಥ ಹಿರೇಮಠ ವಂದಿಸಿದರು.