ಪರಿಶುದ್ಧತೆ ಮನಸ್ಸುಳ್ಳವರು ತಮ ಗರಿವಿಲ್ಲದೆ ಸಾಧನೆ ಶಿಖರವೇರುತ್ತಾರೆ: ಕವಿತಾ ಮಿಶ್ರ

ಕಲಬುರಗಿ:ಎ.24:ಒಳ್ಳೆಯ ನಡತೆಯಿಂದ ನಮಗೆ ತಕ್ಷಣ ಆರ್ಥಿಕ ಲಾಭ ಸಿಗದೇ ಇರಬಹುದು ಆದರೆ ಅಂತಹ ಗುಣಕ್ಕೆ ಸಾವಿರಾರು ಮನಸ್ಸು ಗಳನ್ನು ಗೆಲ್ಲುವ ಶಕ್ತಿ ಇರುತ್ತದೆ. ಲಾಭ-ನಷ್ಟವನ್ನು ಯಾವತ್ತು ಹಣದಲ್ಲಿ ಅಳೆಯಬಾರದು ಪರಿಶುದ್ಧ ಭಾವದಿಂದ ಕಾಯಕ ಮಾಡಿದರೆ ಎಲ್ಲವೂ ತಾನಾಗಿಯೇ ಸಿಗುತ್ತದೆ ಎಂದು ನಾಡಿನ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರ ಹೇಳಿದರು.
ನಿನ್ನೆ ಬಸವ ಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದಲ್ಲಿ ಬಸವ ಯುವ ಸೇನೆ ವತಿಯಿಂದ ಬಸವ ಜಯಂತಿ ಉತ್ಸವ ಸಮಾರಂಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಯಾವುದೆ ಕೆಲಸ ಮೇಲು ಕೀಳು ಇರುವುದಿಲ್ಲ, ಶುದ್ಧವಾದ ಮನಸ್ಸಿನಿಂದ ಕಠಿಣ ಪರಿಶ್ರಮದಿಂದ ಕಾರ್ಯ ಮಾಡಿದರೆ ತಮಗೆ ಗೊತ್ತಿಲ್ಲದೆ ಸಾಧನೆಯ ಶಿಖರವೇರುತ್ತಾರೆ ಎನ್ನುವುದಕ್ಕೆ ನಾನೇ ಸಾಕ್ಷಿ. ಬಸವಾದಿ ಶರಣರು ಸಹಿತ ಇದೆ ಕಾರ್ಯ ಮಾಡಿ ಸರ್ವರ ಮನದಲ್ಲಿ ಅಮರರಾಗಿ ಉಳಿದಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಹುಲಸೂರ ಪೂಜ್ಯರಾದ ಡಾ. ಶಿವಾನಂದ ಮಹಾ ಸ್ವಾಮಿಗಳು ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡುತ್ತಾ ಯಾರು ಸಮಾಜಕ್ಕಾಗಿ ಜೀವನ ಧಾರೆಯೆರೆಯುತ್ತಾರೆ ಅಂತಹ ಮಹಾನುಭಾವರ ಜಯಂತಿ ಆಚರಣೆ ಮಾಡುತ್ತೇವೆ. 890 ವರ್ಷಗಳು ಗತಿಸಿದರು ಬಸವಣ್ಣನವರನ್ನು ನೆನೆದು ಜಯಂತಿ ಆಚರಣೆ ಮಾಡುತ್ತಿದ್ದೇವೆ.
ಏನನೋದಿ, ಏನ ಕೇಳಿ, ಏನ ಮಾಡಿಯೂ ಫಲವೇನು, ನಿಮ್ಮವರೊಲಿಯದನ್ನಕ್ಕ ಶಿವ ಶಿವ, ಮಹಾದೇವಾ, ಬಾಳಿಲ್ಲದವಳ ಓಲೆಯಂತಾಯಿತ್ತೆನಗೆ, ಕೂಡಲಸಂಗಮದೇವಾ ಎನ್ನುವ ಬಸವಣ್ಣನವರ ವಚನದಂತೆ
ವಿಶೇಷವಾಗಿ ಇಂದಿನ ಯುವಕರು ಬಸವಣ್ಣನವರ ವಚನಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮೃದ್ಧ ಸಮಾಜ ನಿರ್ಮಾಣ ಮಾಡುವ ಕಾರ್ಯ ಮಾಡಲೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಉದ್ದಿಮೆದಾರಾದ ಸಿದ್ದರಾಮಪ್ಪ ಬಿರಬಿಟ್ಟೆ, ರಾಜಕೀಯ ಯುವ ಮುಖಂಡರಾದ ಸಾಗರ ಸುಗರೆ, ಯುವ ಮುಖಂಡರಾದ ಕೃಷ್ ಶರಣು ಸಲಗರ, ದಳಪತಿ ಶಿವಶರಣಪ್ಪ ಪಾಟೀಲ, ಸಿದ್ಧಾರೂಢ ಬಾಬ್ಜಿ, ಗ್ರಾಮ ಪಂಚಾಯತಿ ಸದಸ್ಯರಾದ ಶಾಂತಲಿಂಗ ಬಿರುಬಿಟ್ಟೆ, ಬಸವರಾಜ ನಿಂಬಾಳ, ಆಗಮಿಸಿದರು. ಇದೇ ಸಂದರ್ಭದಲ್ಲಿ ಹುಲಸೂರ ಪೂಜ್ಯರಿಗೂ ಹಾಗೂ ಕವಿತಾ ಮಿಶ್ರ ಅವರಿಗೆ ಗ್ರಾಮದ ವತಿಯಿಂದ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಕುಮಾರಿ ಶಿವಾನಿ ಜಾಂತಿಕರ ಅವರು ಭರತನಾಟ್ಯ ಮಾಡಿ ಜನರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಬಸವ ಯುವ ಸೇನೆ ಬಳಗ ಹಾಗೂ ಗ್ರಾಮದ ಜನ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.