ಕಲಬುರಗಿ,ಏ.3: ಈ ಭಾಗದ ವಿದ್ಯಾರ್ಥಿಗಳಿಗೆ ಅತ್ಯುನ್ನತ ಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಗನ್ನಾಥ್ ಬಿಜಾಪುರ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮೂವತ್ತು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಅತಿ ಹೆಚ್ಚು ಬೆಲೆ ಬಾಳುವ ಲ್ಯಾಪ್ ಟಾಪ್‍ಗಳನ್ನು ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಈ ಭಾಗದ ವಿದ್ಯಾರ್ಥಿಗಳಿಗೆ ಇದೊಂದು ವರದಾನವಾಗಿದೆ ಎಂದು ಕೊಂಡಾಡಿದರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ. ರಾಜಶೇಖರ್ ಪಾಟೀಲ್, ಡಾ. ಅನಿಲ್ ಬಿ. ಪಟ್ಟಣ್ ಅವರೂ ಸಹ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನೂತನ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಿದ್ದಾರೆಂದು ತಿಳಿಸಿದರು. ಅತಿ ಶೀಘ್ರ ಕೇಂದ್ರಕ್ಕೆ ಆಗಮಿಸಿ ಹೊಸದೊಂದು ಸೆಂಟರ್ ಆಫ್ ಎಕ್ಸಲೆನ್ಸ್‍ಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದ ಅವರು, ಅಲ್ಲದೇ ರ್ಯಾಂಕ್ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನವನ್ನು ತಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಇದೆ ಸಮಾರಂಭದಲ್ಲಿ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ 9 ರ್ಯಾಂಕ್‍ಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಅಲ್ಲದೇ ಕಳೆದ ಸಾಲಿನಲ್ಲಿ ಬಿ. ಟೆಕ್ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಆ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಜೊತೆಗೆ, ಪ್ರಾದೇಶಿಕ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ವಿಷಯದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಲಾಯಿತು. ಸ್ನಾತಕೋತ್ತರ ಕೇಂದ್ರ ನಾಲ್ಕು ಸಹಾಯಕ ಪ್ರಾಧ್ಯಾಪಕರು ಪಿಚ್‍ಡಿ ಪದವಿ ಪಡೆದ ಅಂಗವಾಗಿ ಅವರನ್ನು ಸಹ ಸತ್ಕರಿಸಲಾಯತು. ಡಾ. ಕೆ. ಶಿವರಾಮನಗೌಡ ಅವರು ಕಾರ್ಯಕ್ರಮ ನಿರೂಪಿಸಿದರು.