ಪರಿಶಿಷ್ಟ ಬಿಪಿಎಲ್ ಪಡಿತರದಾರರಿಗೆ 75ಯೂನಿಟ್‍ನ ಉಚಿತ ವಿದ್ಯುತ್‍ ಅಭಾದಿತ: ಸ್ಪಷ್ಟನೆ

ಬೆಂಗಳೂರು, ಸೆ.9- ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಪಡಿತರ ಚೀಟಿ‌ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡುತ್ತಿರುವ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಯೋಜನೆ ಹಿಂಪಡೆದಿಲ್ಲ ಎಂದು ಸರ್ಕಾರ ಸ್ಪಷ್ಟೀಕರಣ ನೀಡಿದೆ.

ಬಿಪಿಎಲ್ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಾದ ಭಾಗ್ಯಜ್ಯೋತಿ, ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ ಮಾಸಿಕ 75 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಲಾಗುತ್ತಿದ್ದು ಅದು ಅಬಾಧಿತ ಎಂದು ಹೇಳಿದೆ.

ಕೆಲ ಸಾಮಾಜಿಕ ಜಾಲತಾಣಗಳು, ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಈ ಸಂಬಂಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬದವರಿಗೆ “ಅಮೃತ ಜ್ಯೋತಿ” ಕಾರ್ಯಕ್ರಮದಡಿ 75 ಯೂನಿಟ್‍ವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ಹಿಂಪಡೆದಿರುವುದಿಲ್ಲ.ಇಂತಹುದಕ್ಕೆ ಕಿವಿಗೊಡದಿರಿ ಎಂದು ಹೇಳಿದೆ.

ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಳೆದ ತಿಂಗಳು ಆಗಸ್ಟ್ 22 ರಂದು ಹೊರಡಿಸಿದ್ದ ಮಾರ್ಗಸೂಚಿ ಸುತ್ತೋಲೆಯನ್ನು ಇ-ಆಡಳಿತ ಇಲಾಖೆ ಭಾಗಶ: ಪರಿಷ್ಕರಿಸಿದ್ದರಿಂದ ಸುತ್ತೋಲೆ ಈ ತಿಂಗಳ 3, ರಂದು ಹಿಂಪಡೆಯಲಾಗಿದೆಯೇ ಹೊರತು, ಯೋಜನೆ ರದ್ದು ಪಡಿಸಿಲ್ಲ ಎಂದು ತಿಳಿಸಿದೆ.

ಬಿಪಿಎಲ್ ಕುಟುಂಬದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗ್ರಾಹಕರಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಅಮೃತ ಜ್ಯೋತಿ ವಿದ್ಯುತ್ ಯೋಜನೆಯನ್ನು ರಾಜ್ಯ ಸರಕಾರ 2022ರ ಮೇ 18ರಂದು ರಾಜ್ಯಾದ್ಯಂತ ಜಾರಿಗೆ ತಂದಿತ್ತು. ಯೋಜನೆ ರದ್ದುಗೊಳಿಸಲಾಗಿದೆ ಎಂಬ ತಪ್ಪು ಮಾಹಿತಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.ಮತ್ತಷ್ಟು ಪರಿಣಾಮಕಾರಿಯಾಗಿ ಅನಷ್ಟಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ಈ ಯೋಜನೆಯಡಿ ಸುಮಾರು 39 ಲಕ್ಷ ಬಿಪಿಎಲ್ ಕುಟುಂಬಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗ್ರಾಹಕರಿಗೆ ಸಿಗಲಿದ್ದು, ಈಗಾಗಲೇ 4 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ.ಮೇ ಮತ್ತು ಜೂನ್ ತಿಂಗಳ ವಿದ್ಯುತ್ ಬಿಲ್ ಮೊತ್ತವನ್ನು ವನ್ನು ಸುಮಾರು 15000 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಮರುಪಾವತಿಸಲಾಗಿದೆ ಎಂದು ಇಂಧನ ಇಲಾಖೆಯು ತಿಳಿಸಿದೆ.

ಯೋಜನೆಯನ್ನು ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಡಿಬಿಟಿ ವ್ಯವಸ್ಥೆಯಡಿ ಜಾರಿಗೊಳಿಸಲಾಗಿದೆ. ಫಲಾನುಭವಿ ಗ್ರಾಹಕರಿಗೆ ತಾವು ಪಾವತಿಸಿದ ಒಟ್ಟು ವಿದ್ಯುತ್ ಬಿಲ್ಲಿನ ಮೊತ್ತದಲ್ಲಿ 75 ಯೂನಿಟ್‍ಗಳ ವರೆಗಿನ ವಿದ್ಯುತ್ ಶುಲ್ಕದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.