ಪರಿಶಿಷ್ಟ ಬಲಗೈ ಜಾತಿ ಗ್ರೂಪ್ ೨ ಸೇರ್ಪಡೆಗೆ ಒತ್ತಾಯ

ರಾಯಚೂರು, ಏ.೦೫- ಪರಿಶಿಷ್ಟ ಜಾತಿಯ ವರ್ಗೀಕರಣ ಪಟ್ಟಿಯ ಬಲಗೈ ಜಾತಿಯ ಸಮಾನಾತರ ಜಾತಿಗಳಾದ ಮಾಲ, ಬ್ಯಾಗರ, ಬೇಗಾರ ಜಾತಿಗಳು ಗ್ರೂಪ್ -೪ ರಲ್ಲಿ ಸೇರ್ಪಡೆ ಆಗಿದ್ದು ಸದರಿ ಜಾತಿಗಳನ್ನು ಗ್ರೂಪ್-೨ ನಲ್ಲಿ ಸೇರ್ಪಡೆ ಮಾಡುವಂತೆ ಛಲವಾದಿ ಮಹಾಸಭಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಹಿಂದಿನ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಅಸಮಾನತೆ ಮತ್ತು ಸೌಲಭ್ಯಗಳಲ್ಲಿ ವಂಚಿತರಾಗಿದ್ದವೆಂದು ಕೆಲ ಸಂಘಟನೆಗಳ ಒತ್ತಡಕ್ಕೆ ಮಣಿದು ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರು ನ್ಯಾಯಮೂರ್ತಿ ಎ.ಜೆ. ಸದಾಶಿವ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಸದರಿ ಸಮಿತಿಯು ಸುದೀರ್ಘವಾಗಿ ವರದಿಗಳನ್ನು ತಯಾರಿಸಿ ತನ್ನ ವರದಿಯನ್ನು ಡಿ.ವಿ. ಸದಾನಂದಗೌಡ ಮುಖ್ಯಮಂತ್ರಿಗಳ ಅವಧಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಅಂದಿನಿಂದ ಇಲ್ಲಿಯವರೆಗೆ ರಾಜ್ಯ ಸರ್ಕಾರ ಸದರಿ ವರದಿ ಕುರಿತು ಚರ್ಚಿಸದೇ ನಿರ್ಲಕ್ಷ ಮುಂದುವರಿಸುತ್ತಾ ಬಂದಿದೆ ಎಂದು ದೂರಿದರು.
ನ್ಯಾ. ಮೂರ್ತಿ ಎ. ಜೆ ಸದಾಶಿವ ಆಯೋಗ ವರದಿಯಲ್ಲಿ ಎಡಗೈ ಮಾದಿಗ ಸಂಬಂಧಿ ೫೦ ಜಾತಿಗಳಿಗೆ ಶೇ.೬ ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿತ್ತು. ಬಲಗೈ ಜಾತಿಗೆ ಸಂಬಂಧಿಸಿದ ಸಮಾನಾಂತರ ಜಾತಿಗಳು ಪರ್ಯಾಯ ಜಾತಿ ಪದಗಳು ಆದಿ ಕರ್ನಾಟಕ, ಮಾಲ, ಬ್ಯಾಗರ, ಬೇಗಾರ, ಆದಿ ದ್ರಾವಿಡ, ಹೊಲೆಯ, ಹೊಲೆಯರ್, ಬಲಗೈ ಛಲವಾದಿ, ಈ ಜಾತಿಗಳಿಗೆ ಶೇ. ೫ ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿತ್ತು.
ಲಮಾಣಿ, ಭೋವಿ, ಕೊರವ, ಕೊರಚ ಈ ಜಾತಿಗಳಿಗೆ ಶೇ. ೩ ರಷ್ಟು ಮೀಸಲಾತಿ ನೀಡ ಬೇಕೆಂದು ಶಿಫಾರಸ್ಸು ಮಾಡಿತ್ತು.ಅಸ್ಪೃಶ್ಯ ಅಲೆಮಾರಿ ಜಾತಿಗಳಿಗೆ ಶೇ.೧ ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಶಿಫಾರಸ್ಸು ಮಾಡಿತ್ತು. ಮನವಿಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟದ ಮಾಡುವುದರ ಜೊತೆಗೆ ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡಲಾಗಿವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೆ.ನಾಗಲಿಂಗಸ್ವಾಮಿ, ಭೀಮಣ್ಣ ಮಾಂಚಾಲ, ರವೀಂದ್ರನಾಥ ಪಟ್ಟಿ, ಜಗನಾಥ್ ಸುಂಕರಿ, ಶಶಿಧರ, ತಿಮಗುರು ಸೇರಿದಂತೆ ಉಪಸ್ಥಿತರಿದ್ದರು.