ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ವರ್ಗಿಕರಣಕ್ಕೆ ಆಗ್ರಹಿಸಿ ತಮಟೆ ಚಳವಳಿ

ಬೀದರ,ನ.3- ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಎ.ಬಿ.ಸಿ.ಡಿ. ವರ್ಗಿಕರಣ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ನೇತೃತ್ವದಲ್ಲಿ ತಮಟೆ ಚಳುವಳಿ ಕೈಗೊಳ್ಳಲಾಯಿತು.
ತಾಲೂಕಿನ ಜನವಾಡ ಗ್ರಾಮದ ಅಂಬೇಡ್ಕರ್ ವೃತ್ತದಿಂದ ಗ್ರಾಪಂ ಕಚೇರಿಯ ವರೆಗೆ ತಮಟೆ ರ್ಯಾಲಿ ಯ ಮೂಲಕ ತೆರಳಿ ಬೇಡಿಕೆಯ ಮನವಿ ಪತ್ರವನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಎ.ಬಿ.ಸಿ.ಡಿ. ವರ್ಗಿಕರಣ ಅನುಷ್ಠಾನಗೊಳಿಸುವಂತೆ ಕಳೆದ ಸುಮಾರು 25 ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ಸರ್ಕಾರ ತಮ್ಮ ಬೇಡಿಕೆಗೆ ಸ್ಪಂಧಿಸುತ್ತಿಲ್ಲ. ನೆರೆಯ ತೆಲಂಗಾಣ, ಆಂಧ್ರಾ ಪ್ರದೇಶದ ಮಾದಿಗ ಸಮುದಾಯವು ಒಂದೇ ಒಂದು ಬೇಡಿಕೆಯನ್ನಿಟ್ಟುಕೊಂಡು ಹೋರಾಟ ಮಾಡುತ್ತಿರುವ ಸಮಾಜಕ್ಕೆ ಇಲ್ಲಿಯವರೆಗೆ ನ್ಯಾಯ ಸಿಕ್ಕಿರುವುದಿಲ್ಲ.
ಸಂವಿಧಾನದ ಅಡಿಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಕಂಡಂತಹ ಕನಸು “ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು” ಹಕ್ಕನ್ನು ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯವನ್ನು ಸರ್ಕಾರ ಮರೆತಂತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶೋಷಣೆ, ರಾಜಕೀಯ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಉದ್ಯೋಗ ಕ್ಷೇತ್ರಗಳಲ್ಲಿ ವಂಚಿತರಾಗಿರುತ್ತೇವೆ. ಮಾದಿಗ ಸಮುದಾಯದ ಮೂರು ದಶಕಗಳ ಹೋರಾಟವನ್ನು ಎತ್ತಿ ಹಿಡಿದ ಭಾರತ ದೇಶದ ಸರ್ವೋಚ್ಛ ನ್ಯಾಯಾಲಯದ ಐವರ ನ್ಯಾಯಮೂರ್ತಿಗಳ ಪೀಠವು ಒಳಮೀಸಲಾತಿ ಪರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ನ್ಯಾಯಯುತವಾಗಿ ಅತ್ಯಂತ ಶೋಷಣೆಗೆ ಮತ್ತು ಅವಕಾಶಗಳಿಗೆ ವಂಚಿತರಾದ ಪರಿಶಿಷ್ಟ ಜಾತಿಯಲ್ಲಿರುವ ಬಹು ಸಂಖ್ಯಾತರಾದ ಮಾದಿಗ ಸಂಬಂಧಿತ ಜನಾಂಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯವನ್ನು ನೀಡಬೇಕೆಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜು ಕಡ್ಯಾಳ್, ಪ್ರಮುಖರಾದ ಪ್ರಸಾದ ಮನ್ನಳ್ಳಿ, ಜಾಫಟ್‍ರಾಜ್ ಕಡ್ಯಾಳ, ದಯಾಸಾಗರ ಕಡ್ಯಾಳ್, ಕಮಲ ಹೆಗಡೆ, ಗುಂಡಪ್ಪ ಹೊನ್ನಿಕೇರಿ, ಜೀವನ ರಿಕ್ಕೆ, ರಾಭಟ್ ಶೆಂಬೆಳ್ಳಿ, ದೀಪಕ ರಿಕ್ಕೆ, ಸಂಜು ಬೇಂದ್ರೆ, ಗಣಪತರಾವ, ಸಿ.ಎಂ.ದಾಸ ಇತರರಿದ್ದರು.