ಪರಿಶಿಷ್ಟ ಜಾತಿಗೆ ನಿವೇಶನ ವಿತರಿಸದಿದ್ದರೆ ಉಗ್ರ ಹೋರಾಟ:ಕಾರಜೋಳ ಎಚ್ಚರಿಕೆ

ವಿಜಯಪುರ,ಫೆ.25:ಬಬಲೇಶ್ವರ ನಾಕಾ ಬಳಿ ನಿರ್ಮಿಸಲಾಗಿರುವ ಸರ್ದಾರ ವಲ್ಲಭಭಾಯಿ ಪಟೇಲ್ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಹಂಚಿಕೆಯಾಗಬೇಕಾಗಿದೆ, ವಿಶೇಷವಾಗಿ ಎಸ್.ಇ.ಪಿ -ಟಿ.ಎಸ್.ಪಿ ಅನುನದಾದಡಿಯಲ್ಲಿ ನಿರ್ಮಿಸಿದ ಈ ಮಳಿಗೆಗಳನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಹಂಚಬೇಕು. ಆದರೆ ಮಹಾನಗರ ಪಾಲಿಕೆಯ ಸಭೆಯಲ್ಲಿ ಈ ಬಗ್ಗೆ ಯಾವ ಉಲ್ಲೇಖವೂ ಇಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಷಯವಾಗಿ ಮಹಾನಗರ ಪಾಲಿಕೆ ನಿಯಮಾವಳಿ ಗಾಳಿಗೆ ತೂರಿದೆಯೇ ಎಂದು ಬಿಜೆಪಿ ಮುಖಂಡ ಉಮೇಶ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,
ರಸ್ತೆ ಅತಿಕ್ರಮಣದಲ್ಲಿ ಅಂಗಡಿ ಕಳೆದುಕೊಂಡಿರುವವರಿಗೆ ಹಾಗೂ ಉಳಿದವರಿಗೆ ಹಂಚಿಕೆ ಮಾಡುವ ವಿಷಯ ಬರೆಯಲಾಗಿದೆ, ಈ ಮಳಿಗೆಗಳನ್ನು ಉಳಿದ ಸಮುದಾಯಗಳಿಗೆ ಹಂಚಿಕೆ ಮಾಡಲು ಬರುವುದೇ ಇಲ್ಲ. 2020-21 ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಎಸ್.ಇ.ಪಿ-ಟಿ.ಎಸ್.ಪಿ ಅಡಿಯಲ್ಲಿ 3.56 ಕೋಟಿ ರೂ. ವೆಚ್ಚದಲ್ಲಿ ಈ ಮಳಿಗೆ ನಿರ್ಮಿಸಿ 2022 ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. ಹೀಗಿರುವಾಗ ಎಸ್.ಸಿ.ಸಮುದಾಯಕ್ಕೆ ಉಪ ಜೀವನ ಹಾಗೂ ಸ್ವ ಉದ್ಯೋಗಕ್ಕೆ ಅನುಕೂಲವಾಗಲು ಈ ಮಳಿಗೆ ಹಂಚಿಕೆಯಾಗಬೇಕು, ಆದರೆ ಈ ವಿಷಯವಾಗಿ ಮಹಾನಗರಪಾಲಿಕೆ ಬೇರೆ ನಿಲುವು ತಾಳಿ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಈ ವಿಷಯವನ್ನೇ ಉಲ್ಲೇಖಿಸಿಲ್ಲ. ಹೀಗಾಗಿ ಎಸ್.ಸಿ.-ಎಸ್.ಟಿ.ಸಮುದಾಯಕ್ಕೆ ದೊಡ್ಡ ಅನ್ಯಾಯ ಮಾಡಿದೆ. ಹೀಗಾಗಿ ಕೂಡಲೇ ಇದನ್ನು ತಿದ್ದುಪಡಿ ಮಾಡಿ ಎಸ್.ಸಿ. -ಎಸ್.ಟಿ. ಸಮುದಾಯಗಳಿಗೆ ಹಂಚಿಕೆ ಮಾಡಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.