ಪರಿಶಿಷ್ಟ ಕಲ್ಯಾಣಕ್ಕೆ ಕಟಿಬದ್ಧವಾಗಿರುವ ಬಿಜೆಪಿಯನ್ನು ಗೆಲ್ಲಿಸಿ: ಶ್ರೀರಾಮುಲು


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ13: ಕೇಂದ್ರ ಮತ್ತು ರಾಜ್ಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಪರಿಶಿಷ್ಟ ಜನರ ಜೀವನದಲ್ಲಿ ಗುಣಾತ್ಮಕ ಬದಲಾವಣೆಗೆ ಶ್ರಮಿಸಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳ ನೆಪದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳ ಶಿಷ್ಯವೇತನ, ಸ್ವಯಂ ಉದ್ಯೋಗಕ್ಕೆ ನೀಡಬೇಕಿದ್ದ ಅನುದಾನವನ್ನು ಕಿತ್ತುಕೊಂಡಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಗುಡುಗಿದರು.
ಹೊಸಪೇಟೆಯಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಪರಿಶಿಷ್ಟ ಪಂಗಡಗಳ ಮುನ್ನಡೆ ಮಹಾಸಮಾವೇಶವನ್ನು ಉದ್ಘಾಟಿಸಿದ ಅವರು ಮಾತನಾಡಿ, ಬುಡಕಟ್ಟು ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಪ್ರತ್ಯೇಕವಾಗಿ ಇಲಾಖೆಯನ್ನೇ ಸ್ಥಾಪಿಸಿತು. ಇಂದಿನ ಮೋದಿ ಸರ್ಕಾರ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪತಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿಸುವ ಮೂಲಕ ಪರಿಶಿಷ್ಟ ಜನರನ್ನು ಗೌರವಿಸಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3 ರಿಂದ 7ಕ್ಕೆ ಹೆಚ್ಚಿಸಿದೆ. ಸದಾ ಪರಿಶಿಷ್ಟರ ಕಾಳಜಿ ವಹಿಸುವ ಬಿಜೆಪಿಯನ್ನು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಇರುವ ಎಸ್‍ಸಿಪಿ, ಟಿಎಸ್‍ಪಿ ಅನುದಾನವನ್ನು ಗ್ಯಾರೆಂಟಿಗಳಿಗೆ ಬಳಸಿಕೊಂಡಿದ್ದು, ಸಮುದಾಯದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರನ್ನಾಗಿಸಿದೆ ಎಂದು ಆರೋಪಿಸಿದರು.
ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಬಳ್ಳಾರಿ- ಹೊಸಪೇಟೆ ರಾಷ್ಟ್ರಿಯ ಹೆದ್ದಾರಿಗೆ 8,200 ಕೋಟಿ ರೂ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅನೇಕ ರೈಲ್ವೇ ಮೇಲ್ಸೇತುವೆ, ಹೊಸ ರೈಲುಗಳಿಗೆ ಚಾಲನೆ ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದೆ. ಜಾಗತಿಕವಾಗಿ ಮೂಲೆ ಗುಂಪಾಗಿದ್ದ ಭಾರತ ಇಂದು ವಿಶ್ವಗುರುವಾಗು ಹಾದಿಯಲ್ಲಿದೆ. ಈ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಬೇಕು ಎಂದು ಮನವಿ ಮಾಡಿದರು.
ವೇದಿಕೆ ಮೇಲೆ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಎಸ್‍ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರಿ ಹನಮಂತು, ಜಿಲ್ಲಾಧ್ಯಕ್ಷ ಜಗದೀಶ್ ಕವಟಗಿ, ನಗರಸಭೆ ಅಧ್ಯಕ್ಷೆ ಎ.ಲತಾ, ಮಾಜಿ ಅಧ್ಯಕ್ಷೆ ಸುಂಕಮ್ಮ, ಮಾಜಿ ಉಪಾಧ್ಯಕ್ಷ ಎನ್.ರೂಪೇಶ್ ಕುಮಾರ್ ಸೇರಿದಂತೆ ನಗರಸಭೆ ಸದಸ್ಯರು, ಪಕ್ಷದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
`ಜೂಮ್’ನಲ್ಲಿ ಸಿದ್ಧಾರ್ಥ ಸಿಂಗ್ ಭಾಷಣ
ಕಾರ್ಯದ ನಿಮಿತ್ತ ಜಿಂದಾಲ್ ವಿಮಾನ ನಿಲ್ದಾಣದ ಮೂಲಕ ಬೆಂಗಳೂರು ತೆರಳುತ್ತಿದ್ದ ಬಿಜೆಪಿ ರಾಜ್ಯ ಕೋಶಾಧ್ಯಕ್ಷ ಸಿದ್ಧಾರ್ಥ ಸಿಂಗ್ ಜೂಮ್ ಪೋರ್ಟಲ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಕ್ಕೆ ವಾಲ್ಮೀಕಿ ಮಹರ್ಷಿ, ಏಕಲವ್ಯ ಅವರ ಕೊಡುಗೆ ಅಪಾರ. ಅಬ್ ಕೀ ಬಾರ್ ಚಾರ್‍ಸೌ ಪಾರ್ ಎಂಬ ಗುರಿ ತಲುಪಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು. ಬಳ್ಳಾರಿ ಲೋಕಸಭಾ ಗೆಲುವಿನ ಕಮಲ ಮಾಲೆಯನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಬೇಕು ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.