ಪರಿಶಿಷ್ಟರ ಸೌಲಭ್ಯ ದುರ್ಬಳಕೆ ವಿರುದ್ಧ ಕ್ರಮ-ಡಿಸಿ

ಕೋಲಾರ,ಏ.೨: ವಿವಿಧ ಇಲಾಖೆಗಳಲ್ಲಿ ಎಸ್.ಸಿ, ಎಸ್.ಟಿ ಜನಾಂಗದ ಪಲಾನುಭವಿಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಇತರೆ ಜಾತಿಯವರು ಸುಳ್ಳು ದಾಖಲೆ, ನಕಲಿ ಪ್ರಮಾಣ
ಪತ್ರವನ್ನು ನೀಡಿ ಸೌಲಭ್ಯಗಳನ್ನು ಪಡೆದಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಆರ್.ಸೆಲ್ವಮಣಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಅನುಸೂಚಿತ ಜಾತಿ ಮತ್ತುಅನುಸೂಚಿತ ಬುಡಕಟ್ಟುಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಪಂಗಡದ ಜಾತಿ ಪ್ರಮಾಣ
ಪತ್ರಗಳನ್ನು ಪಡೆದು ಇತರೆ ವರ್ಗದವರು ಸೌಲಭ್ಯಪಡೆಯುತ್ತಿರುವ ಬಗ್ಗೆ ದೂರುಗಳಿದ್ದು ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಕೆ.ಐ.ಎ.ಡಿ.ಬಿ ಇಂದ ಎಸ್.ಸಿ, ಎಸ್.ಟಿ ಫಲಾನುಭವಿಗಳಿಗೆ ಭೂಮಿ ನೀಡಲು ಲಾಟರಿ ವಿಧಾನದಮೂಲಕ ಆಯ್ಕೆ ಮಾಡಲಾಗುವುದು. ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳು ಪಹಣಿ ಹಾಗೂ ಇತರೆ ದಾಖಲೆಗಳನ್ನು ಸೂಕ್ತ ಸಮಯಕ್ಕೆ ನೀಡದಿದ್ದರೆ ಅವರಿಗೆ ನೋಟಿಸ್ ನೀಡಿ, ಇತರೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ನಿಜವಾದ ಮ್ಯಾನುವಲ್ ಸ್ಕ್ಯಾವೆಂಜರ್‍ಗಳನ್ನು ಗುರಿತಿಸಿ ಸೌಲಭ್ಯಗಳನ್ನು ನೀಡಿ. ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಬ್ಯಾಂಕರ್‍ಗಳ ಸಭೆಯನ್ನು ನಡೆಸಲಾಗುವುದು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಕೊರೆದಿರುವ ಕೊಳವೆ ಬಾವಿಗಳಿಗೆ ಪಂಪು, ಮೋಟಾರ್ ಅಳವಡಿಸಿ ವಿದ್ಯುತ್ ಸೌಲಭ್ಯ ಕಲ್ಪಿಸಿ. ಮುಂದಿನ ಸಭೆಯ ಒಳಗೆ ಜಿಲ್ಲೆಯಲ್ಲಿ ವಾಲ್ಮೀಕಿ ಭವನಗಳ ನಿರ್ಮಾಣವಾಗಬೇಕು ಎಂದು ಸೂಚಿಸಿದರು.
ಸಮಿತಿಯ ಸದಸ್ಯರಾದ ನಾಗನಾಳ ಮುನಿಯಪ್ಪ ಅವರು ಮಾತನಾಡಿ, ದೌರ್ಜನ್ಯ ಸಮಿತಿ ಸಭೆಗೆ ಪಬ್ಲಿಕ್ ಪ್ರಾಸಿಕ್ಯೂಟರ್‌ಬರಬೇಕು. ಕೆಲವು ದಲಿತರು ಜಮೀನನ್ನು ಅನುಭೋಗ ಮಾಡುತ್ತಿದ್ದಾರೆ, ಆದರೆ ಅವರ ಒಡೆತನದಲ್ಲಿ ಜಮೀನು ಇಲ್ಲ.
೨೦೦೪ ರಿಂದ ಮಂಜೂರು ಆಗಿರುವ ಜಮೀನುಗಳಿಗೆ ಸಾಗುವಳಿಚೀಟಿಗಳನ್ನು ನೀಡದೆ ತಹಶೀಲ್ದಾರ್‍ಗಳು ಬಾಕಿ ಉಳಿಸಿಕೊಂಡಿದ್ದಾರೆ. ಕೃಷಿ ಇಲಾಖೆಯಲ್ಲಿ ಟಿಲ್ಲರ್, ಟ್ರ್ಯಾಕ್ಟರ್ ಮತ್ತು ಹನಿ ನೀರಾವರಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಆದರೆ ಎಸ್.ಸಿ. ಎಸ್.ಟಿ ಜಾತಿ ಪ್ರಮಾಣಪತ್ರವನ್ನು ಪಡೆದು ಇತರೆ ವರ್ಗದವರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.ಸಮಿತಿ ಸದಸ್ಯರು ಹಾಗೂ ಕೋಲಾರ ನಗರಸಭೆಯ ಸದಸ್ಯರಾದ ಅಂಬರೀಶ್ ಅವರು ಮಾತನಾಡಿ, ಕೋಲಾರದ ಸ್ಲಮ್ ಕಾಲೋನಿಯಲ್ಲಿ ಸುಮಾರು ೯೦ ಮನೆಗಳಲ್ಲಿ ಜನವಾಸವಾಗಿದ್ದಾರೆ. ಅವರಿಗೆ ಹಕ್ಕುಪತ್ರವನ್ನು ಇಲ್ಲಿಯವರೆಗೆನೀಡಿಲ್ಲ. ಮೂಲಭೂತ ಸೌಲಭ್ಯಗಳಿಲ್ಲ, ವಿದ್ಯುತ್ ಸೌಲಭ್ಯವಿಲ್ಲ.ಅಬಕಾರಿ ಇಲಾಖೆಯಲ್ಲಿ ಸಿ.ಎಲ್ ೭ ಅಡಿ ಬಾರ್ ತೆರೆಯಲು ಎಸ್.ಸಿ, ಎಸ್.ಟಿಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು ಅನಗತ್ಯವಾಗಿ ವಿಳಂಬಮಾಡಲಾಗುತ್ತಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಗಮದಿಂದ ಕೊರೆಸಿರುವ ಕೊಳವೆಬಾವಿಗಳಿಗೆ ಪಂಪು ಮೋಟರ್ ಮತ್ತುವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದರು.
ಸಮಿತಿಯ ಸದಸ್ಯರಾದ ವೆಂಕಟರಾಮ್ ಅವರು ಮಾತನಾಡಿ, ಅಟ್ರಾಸಿಟಿ ಪ್ರಕರಣಗಳುದಾಖಲಿಸಿದಾಗ ಕೌಂಟರ್ ಕೇಸ್ ದಾಖಲಿಸುವಂತೆ ಪಿತೂರಿ ನಡೆಸಲಾಗುತ್ತಿದೆ. ಇದರಿಂದ ಅಟ್ರಾಸಿಟಿ ಪ್ರಕರಣಗಳು ವಿಫಲವಾಗುತ್ತಿವೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಅಟ್ರಾಸಿಟಿ ಪ್ರಕರಣಗಳ ಸಾಕ್ಷಿದಾರರಿಗೆ ಸರಿಯಾದ ಮಾರ್ಗದರ್ಶನ ನೀಡುವುದಿಲ್ಲ. ಆದ್ದರಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಸಿಗುತ್ತಿಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಕುಂದುಕೊರತೆ ಸಭೆಯನ್ನು ಪ್ರತಿ ತಿಂಗಳು ನಡೆಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್, ಅಪರ ಜಿಲ್ಲಾಧಿಕಾರಿಗಳಾದ ಡಾ.ಸ್ನೇಹಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ, ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್, ಸಮಿತಿಯ ಸದಸ್ಯರಾದ ವೆಂಕಟೇಶ್, ರವೀಂದ್ರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.