ಪರಿಶಿಷ್ಟರ ಕುರಿತು ಅವಹೇಳನ: ಟಿಎಂಸಿ ನಾಯಕಿ ಸುಜಾತಾ ಮೊಂಡಲ್ ಖಾನ್ ವಿರುದ್ಧ ಕ್ರಮಕ್ಕೆ ಒತ್ತಾಯ

ಕಲಬುರಗಿ.ಏ.17: ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಸುಜಾತಾ ಮೊಂಡಲ್ ಖಾನ್ ಹಾಗೂ ಆ ಪಕ್ಷದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷದ ಮಹಾನಗರ ಜಿಲ್ಲಾ ಎಸ್‍ಸಿ ಮೋರ್ಚಾ ಜಿಲ್ಲಾಧ್ಯಕ್ಷ ದೇವಿಂದ್ರ ಎಸ್. ಸಿನ್ನೂರ್ ಅವರು ಒತ್ತಾಯಿಸಿದರು.
ಶನಿವಾರ ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಮಮತಾ ಬ್ಯಾನರ್ಜಿಯವರು ಬಡವರಾದ ಪರಿಶಿಷ್ಟ ಜಾತಿಯವರಿಗೆ ನೆರವಾಗಿದ್ದರೂ ಅವರ ಸಣ್ಣತನ ಬದಲಾಗಿಲ್ಲ. ಕೆಲವರು ತಮ್ಮ ಪ್ರವೃತ್ತಿಯಿಂದ ಭಿಕ್ಷುಕರಾಗಿದ್ದಾರೆ. ಇನ್ನೂ ಕೆಲವರು ಸಂದರ್ಭದಿಂದಾಗಿ ಭಿಕ್ಷುಕರಾಗುತ್ತಾರೆ. ಪರಿಶಿಷ್ಟ ಜಾತಿಯವರು ಭಿಕ್ಷುಕ ಪ್ರವೃತ್ತಿಯನ್ನು ಹೊಂದಿದ್ದಾರೆ ಎಂದು ನಿಂದನೆ ಮಾಡಿದ್ದಾರೆ ಎಂದು ದೂರಿದರು.
ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರನ್ನು ಅವಮಾನಿಸುವ ಉದ್ದೇಶದಿಂದಲೇ ಭಿಕ್ಷುಕರು ಎಂಬ ಪದ ಬಳಸಿದ್ದಾರೆ. ಇದು ಖಂಡನಾರ್ಹ. ಪರಿಶಿಷ್ಟ ಸಮುದಾಯದವರಲ್ಲಿ ದ್ವೇಷ ಮನೋಭಾವನೆ ಹುಟ್ಟುಹಾಕುವಂತಿದೆ. ಇದು ಆತಂಕಕಾರಿ ಕ್ರಮವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇಂತಹ ಆಘಾತಕಾರಿ ಮತ್ತು ಅವಮಾನಕಾರಿ ಹೇಳಿಕೆಗಳು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡ ಪ್ರಜಾಪ್ರಭುತ್ವದ ಚಿಂತನೆಯನ್ನು ಖಂಡಿಸುವಂತಿದೆ. ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡರು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ದ್ವೇಷ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಈ ಸಂಬಂಧ ಭಾರತದ ಚುನಾವಣಾ ಆಯೋಗ ಮತ್ತು ಪರಿಶಿಷ್ಟ ಜಾತಿಗೆ ಸಂಬಂಧಿಸಿದ ರಾಷ್ಟ್ರೀಯ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ. ಭಾರತದ ಸಂವಿಧಾನದ ಆಶಯಗಳನ್ನು ಕಾಪಾಡುವ ಉನ್ನತ ಸ್ಥಾನದಲ್ಲಿ ಇರುವ ತಾವು ಕೂಡಲೇ ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಿನೇಶ್ ಎಸ್. ದೊಡ್ಡಮನಿ, ಪ್ರಲ್ಹಾದ್ ಹಡಗಿಲ್, ಆನಂದ್ ಚಿಂಚೋಳಿ, ಹಣಮಂತ್ ವಚ್ಚಾ, ವಿಕಾಸ್ ಕರಣಿಕ್, ವಿಶಾಲ್ ದರ್ಗಿ, ರಾಜು ವಾಡೇಕರ್, ವಿಠಲ್ ನೆಲೋಗಿ, ದತ್ತು ಡೋಲಾರೆ, ಸಂತೋಷ್ ಹಾದಿಮನಿ, ತುಕಾರಾಮ್ ರಾಮಪೂರೆ, ಅಭಿ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.