ಪರಿಶಿಷ್ಟರ ಒಳ ಮೀಸಲಾತಿಗೆ ಸ್ವಾಗತ: ಸದಾಶಿವ ಆಯೋಗದ ವರದಿ ಅಂಗೀಕಾರಕ್ಕೆ ಕಲಗುರ್ತಿ ಒತ್ತಾಯ

ಕಲಬುರಗಿ,ಮಾ.26: ಬಹುದಿನಗಳ ಬೇಡಿಕೆಯಾದ ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಭಿನಂದನಾರ್ಹರು. ಕೂಡಲೇ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ್ ಆಯೋಗದ ವರದಿಯನ್ನು ಕೇಂದ್ರಕ್ಕೆ ಕಳಿಸಿ ಅಂಗೀಕರಿಸಬೇಕು ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ದಶರಥ್ ಎಂ. ಕಲಗುರ್ತಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ವಿಶೇಷ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ಸಂಪುಟ ಉಪ ಸಮಿತಿ ವರದಿಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಶೇಕಡಾ 17ರಷ್ಟು ಮೀಸಲಾತಿಯಲ್ಲಿ ಮಾದಿಗ ಸಂಬಂಧಿತ ಜಾತಿಗಳಿಗೆ ಶೇಕಡಾ 6ರಷ್ಟು, ಹೊಲೆಯ ಸಂಬಂಧಿತ ಜಾತಿಗಳಿಗೆ ಶೇಕಡಾ 5.5ರಷ್ಟು, ಬಂಜಾರಾ ಮತ್ತು ಭೋವಿ ಸಂಬಂಧಿತ ಜಾತಿಗಳಿಗೆ ಶೇಕಡಾ 4.5ರಷ್ಟು ಮತ್ತು ಅಲೆಮಾರಿ ಜನಾಂಗಕ್ಕೆ ಶೇಕಡಾ 1ರಷ್ಟು ಒಳ ಮೀಸಲಾತಿ ನೀಡಿರುವುದು ಸ್ವಾಗತಾರ್ಹ ಎಂದರು.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಆಯೋಗ ರಚಿಸಲಾಗಿತ್ತು. ಎನ್.ವೈ. ಹನುಮಂತಪ್ಪ ಅವರು ಅಧ್ಯಕ್ಷರಾಗಿದ್ದರು. ಆದಾಗ್ಯೂ, ಅವರು ಕೆಲವು ದಿನಗಳ ನಂತರ ರಾಜೀನಾಮೆ ಸಲ್ಲಿಸಿದ್ದರಿಂದ ಹೆಚ್. ಬಾಲಕೃಣ ಅವರ ನೇತೃತ್ವದಲ್ಲಿ ಸಮೀಕ್ಷೆ ಕೈಗೊಂಡಾಗ ಅವರೂ ಸಹ ಸ್ವಲ್ಪ ದಿನಗಳಲ್ಲಿ ಅಸುನೀಗಿದರು. ನಂತರ ಧರ್ಮಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಎ.ಜೆ. ಸದಾಶಿವ ಆಯೋಗವನ್ನು ರಚಿಸಿದರು. ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಆರ್ಥಿಕ ನೆರವು ನೀಡಿದ್ದರಿಂದ ಸಮೀಕ್ಷೆ ಚುರುಕುಗೊಂಡಿತು ಎಂದು ಅವರು ಹೇಳಿದರು.
ಆಯೋಗವು ಸುಮಾರು 200 ಪುಟಗಳ ವರದಿಯನ್ನು ಸಿದ್ಧಪಡಿಸಿತು. ಅಸ್ಪøಶ್ಯ ಜನಗಣತಿ ಮಾಡಿ ಜಾತಿವಾರು ಶಿಕ್ಷಣ, ಉದ್ಯೋಗ, ಕೃಷಿ, ಬಡತನ, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಹಾಗೂ ರಾಜಕೀಯ ಸ್ಥಾನಮಾನಗಳಂತೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ ಮಾಡಿದ ನಂತರ ಶೇಕಡಾ 33.47ರಷ್ಟಿರುವ ಎಡಗೈ ಗುಂಪಿಗೆ ಶೇಕಡಾ 6ರಂತೆ, ಶೇಕಡಾ 32ರಷ್ಟಿರುವ ಬಲಗೈ ಗುಂಪಿಗೆ ಶೇಕಡಾ 5ರಷ್ಟು, ಇತರೆ ಉಪ ಜಾತಿಗಳಿಗೆ ಶೇಕಡಾ 3ರಷ್ಟು, ಅಲೆಮಾರಿ ಅಸ್ಪøಶ್ಯರಿಗೆ ಶೇಕಡಾ 1ರಂತೆ ಮೀಸಲಾತಿ ನಿಗದಿಪಡಿಸಿ ಆಯೋಗ ಸರ್ಕಾರಕ್ಕೆ 2011ರ ಜೂನ್ 14ರಂದು ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ವರದಿ ಸಲ್ಲಿಸಲಾಗಿತ್ತು. ಸುಮಾರು 13 ವರ್ಷಗಳಾದರೂ ಸಹ ಯಾವುದೇ ಸರ್ಕಾರ ಅಂಗೀಕರಿಸದೇ ಅಗೌರವ ತೋರಿಸಿದ್ದರು ಎಂದು ಅವರು ತಿಳಿಸಿದರು.
ಪ್ರಸ್ತುತ ಬಿಜೆಪಿ ಸರ್ಕಾರವು ತೆಗೆದುಕೊಂಡ ನಿರ್ಣಯವನ್ನು ನಯವಾಗಿ ತಿರಸ್ಕರಿಸುವುದಾಗಿ ತಿಳಿಸಿದ ಹೇಳಿದ ಅವರು, ಇದರಿಂದ ಮಾದಿಗರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಪರಿಶಿಷ್ಟ ಜಾತಿಯಲ್ಲಿ ಬರುವ ನಾಲ್ಕು ಗುಂಪುಗಳಿಗೆ 0.5-0.5ರಂತೆ ಹಂಚಿಕೆ ಮಾಡಬೇಕಿತ್ತು. ಆದಾಗ್ಯೂ, ಅಸ್ಪøಶ್ಯರಲ್ಲದ ಬಂಜಾರಾ ಮತ್ತು ಭೋವಿ ಸಂಬಂಧಿತ ಜಾತಿಗಳಿಗೆ 1.5 ಮೀಸಲಾತಿ ನೀಡಿ ಮತ್ತು ಹೊಲೆಯ ಸಂಬಂಧಿತ ಜಾರಿಗಳಿಗೆ ಬರೀ 0.5 ಹೆಚ್ಚಿನ ಮೀಸಲಾತಿ ನೀಡಿ, ಮಾದಿಗರಿಗೆ ಯಾವುದೇ ಹೆಚ್ಚಿನ ಮೀಸಲಾತಿ ಕಲ್ಪಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಾದಿಗರಿಗೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಯಥಾವತ್ತಾಗಿ ಶೇಕಡಾ 6ರಂತೆ ಮೀಸಲಾತಿ ನೀಡಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮಾದಿಗರ ಜೊತೆಗೆ ಎಲ್ಲ ಪರಿಶಿಷ್ಟ ಜಾತಿ ಜನಾಂಗದ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರವು ಎ.ಜೆ. ಸದಾಶಿವ್ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳೀಸಬೇಕು. ಅಂದಾಗ ಆ ಆಯೋಗಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ್ ನಾಟೀಕಾರ್ ಅವರು ಉಪಸ್ಥಿತರಿದ್ದರು.