
ಕಲಬುರಗಿ:ಆ.18: ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಉಪಯೋಜನೆ (ಎಸ್ಸಿ, ಎಸ್ ಪಿ, ಟಿಎಸ್ ಪಿ) ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಬಾರದು, ದಲಿತರ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ವಿಧಾನ ಮಂಡಲದ ಅಧಿವೇಶನ ಕರೆಯಬೇಕು. ಎಸ್ಸಿ ಎಸ್ ಪಿ, ಟಿಎಸ್ ಪಿ ಯೋಜನೆಗೆ ಸಂಬಂಧಿಸಿದಂತೆ ಮೌಲ್ಯಮಾಪನ ರಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಶೇಕ ಬಾಲಾಜಿ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ ಎಸ್ ಪಿ ಟಿಎಸ್ ಪಿಯ 11 ಸಾವಿರ ಕೋಟಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ.ತಕ್ಷಣ ಈ ಆದೇಶ ರದ್ದುಗೊಳಿಸಬೇಕು. ರೈತರ ಸಮಸ್ಯೆ,ಸಂವಿಧಾನದ ಬಗ್ಗೆ ಚರ್ಚಿಸಲು ವಿಧಾನ ಮಂಡಲದ ಅಧಿವೇಶನ ಕರೆದಂತೆ ದಲಿತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಅವರು ಆಗ್ರಹಿಸಿದರು. ಎಸ್ಸಿ , ಎಸ್ ಪಿ, ಹಾಗೂ ಟಿ.ಎಸ್.ಪಿ ಯೋಜನೆ ಜಾರಿಗಾಗಿ ಮೂರು ದಶಕವಾಗಿದ್ದು ಇಲ್ಲಿಯವರೆಗೂ ಬಿಡುಗಡೆಯಾಗಿರುವ ಅನುದಾನ ಸರಿಯಾಗಿ ವೆಚ್ಚವಾಗಿದೆಯೇ ಎಂಬುದನ್ನು ಪರಿಶೀಲಿಸಲು ಮೌಲ್ಯಮಾಪನ ಆಯೋಗ ರಚಿಸಬೇಕು. ಇನ್ನೂ ಮುಂದೆ ಬಿಡುಗಡೆಯಾಗುವ ಪ್ರತಿ ವರ್ಷದ ಅನುದಾನ ಸರಿಯಾಗಿ ಬಳಕೆಯಾಗುತ್ತಿದೆಯೇ ಎಂದು ನಿಗಾವಹಿಸಲು ಮಾನಿಟರಿ ಏಜೆನ್ಸಿ ಸ್ಥಾಪಿಸಿ ಇದಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.