ಪರಿವರ್ತನೆಯ ಪ್ರಬಲ ಮಾಧ್ಯಮ ರಂಗಕಲೆ: ಬಸವಪ್ರಭು ಶ್ರೀ

ದಾವಣಗೆರೆ.ಮಾ.೩೦; ಜನರ ಜೀವನ ಸುಧಾರಣೆಗೆ, ಸಮಾಜದ ಪ್ರಗತಿಗೆ, ನಾಡಿನ ಉನ್ನತಿಗೆ ರಂಗಕಲೆ ಪೂರಕವಾಗಿದೆ, ನಾಟಕಗಳು ರಂಜನೆಯೊಂದಿಗೆ ಬೋಧನೆ ನೀಡುವ, ಮೌಲ್ಯಗಳನ್ನು ಭಿತ್ತಿ ಪ್ರಬುದ್ಧತೆಯನ್ನು ಬೆಳೆಸುವಲ್ಲಿ ಮಹತ್ತರ ಕಾರ್ಯನಿರ್ವಹಿಸಿವೆ ಎಂದು ವಿರಕ್ತಮಠ, ಶಿವಯೋಗಾಶ್ರಮದ ಶ್ರೀ ಬಸವಪ್ರಭುಸ್ವಾಮಿಗಳವರು ಅಭಿಪ್ರಾಯಪಟ್ಟರು.ಪೂಜ್ಯರು ನಗರದ ದುರ್ಗಾಂಬಿಕಾ ದೇವಸ್ಥಾನದ ಹತ್ತಿರ, ಶಿವಾಜಿ ವೃತ್ತದಲ್ಲಿ ಶ್ರೀಕಲಾ ವಿಕಾಸ ನಾಟಕ ಸಂಘ ಹಾಗೂ ದಾವಣಗೆರೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಇತ್ತೀಚಿಗೆ (ಮಾರ್ಚ್ 25) ಆಯೋಜಿಸಲಾಗಿದ್ದ ನಾಟಕೋತ್ಸವ ಹಾಗೂ ರಂಗಗೀತೆಗಳ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಾನಿಧ್ಯತೆ ವಹಿಸಿ ಮಾತನಾಡುತಾ, ನಾಟಕಗಳು ನಾಡಿನ ಐತಿಹಾಸಿಕ ಘಟನೆಗಳನ್ನು ತಿಳಿಸುತ್ತ, ಸಾಧಕರ ಜೀವನದರ್ಶನ ಮಾಡಿಸುತ್ತ, ಆದರ್ಶ ಬದುಕಿಗೆ ಸ್ಪೂರ್ತಿ ಹಾಗೂ ಪ್ರೇರಣೆ ನೀಡುತ್ತವೆ, ರಂಗಭೂಮಿ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಬಲ್ಲದು, ಆದ್ದರಿಂದ ರಂಗಕಲೆ-ಕಲಾವಿದರಿಗೆ ಕಲಾಭಿಮಾನಿಗಳು ಹೆಚ್ಚಿನ ಸಹಕಾರ, ಪ್ರೋತ್ಸಾಹ ನೀಡಬೇಕೆಂದು ಹೇಳಿದರು.ಮುಖ್ಯ ಅತಿಥಿಗಳಾಗಿದ್ದ ಕಾರ್ಮಿಕ ಮುಖಂಡರಾದ ಹೆಚ್.ಕೆ.ರಾಮಚಂದ್ರಪ್ಪ ಅವರು ಮಾತನಾಡಿ, ಕಳೆದ ವರ್ಷದ ಕರೋನಾ ಹಾವಳಿಯಿಂದ ಕಲಾವಿದರು ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ್ದಾರೆ, ಜೀವಂತ ಕಲೆ ನಾಟಕವನ್ನು ಉಳಿಸುವ ಮೂಲಕ ಬದುಕಿನಲ್ಲಿ ಶ್ರೇಷ್ಠತೆಯನ್ನು ಕಂಡುಕೊಳ್ಳೋಣ, ಆದರ್ಶ ಸಂಸ್ಕೃತಿಯನ್ನು ರಕ್ಷಿಸೋಣವೆಂದರು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಐರಣಿ ಮಾತನಾಡಿ, ಹಲವಾರು ಕಲಾಪ್ರಕಾರಗಳ ಸಂಗಮವೇ ನಾಟಕ, ಆಧುನಿಕ ಮಾಧ್ಯಮಗಳ ಪೈಪೋಟಿಯಲ್ಲಿ ರಂಗಕಲೆ ಸೊರಗಿರಬಹುದೇ ವಿನಹ ಅವನತಿಯಾಗಲು ಸಾಧ್ಯವಿಲ್ಲ, ಕಲಾವಿದರ, ಪೋಷಕರ, ಪ್ರೇಕ್ಷಕರ ಕಾಳಜಿಪರ ಮನಸ್ಸು, ಕ್ರಿಯಾಶೀಲತೆಯಿಂದ ದೃಢವಾಗಿ ನಿಲ್ಲಬಲ್ಲದೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಮಾಲತೇಶರಾವ್ ಜಾಧವ್, ಗೋಪಾಲರಾವ್ ಮಾನೆ ಇವರು ರಂಗಭೂಮಿ ಕುರಿತು ಮಾತನಾಡಿದರು, ಇದೇ ಸಂದರ್ಭದಲ್ಲಿ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಐರಣಿ, ರಂಗ ಕಲಾವಿದರಾದ ಹನುಮಂತರಾವ್ ಪವಾರ್, ವೀರಭದ್ರಯ್ಯ ಸ್ವಾಮಿ ಸಿದ್ಧನಮಠ ಇವರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಆರಂಭದಲ್ಲಿ ಉಮಾದೇವಿ ಪ್ರಾರ್ಥಿಸಿದರು, ಶೃತಿಭಟ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು, ಸಮಾರಂಭದ ನಂತರ ಸಂಘದ ಕಲಾವಿದರಿಂದ ಪ್ರದರ್ಶಿಸಿದ “ಚಿನ್ನದ ಗೊಂಬೆ” ನಾಟಕವು ಯಶಸ್ವಿ ಪ್ರದರ್ಶನ ಕಂಡು ಜನಮನ ಸೆಳೆಯಿತು.