ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಎರಡನೇ ಸುತ್ತಿನ ಲಸಿಕಾ ಅಭಿಯಾನಕ್ಕೆ ಮೇಯರ್ ಚಾಲನೆ


ಬಳ್ಳಾರಿ,ಸೆ.12: ಕುಟುಂಬದ ಸದಸ್ಯರು ಕುಟುಂಬದ ಕೆಲಸಗಳಿಗೆ ನೀಡುವ ಮಹತ್ವವನ್ನು ಮಗುವಿನ ಆರೋಗ್ಯಕ್ಕಾಗಿ ನೀಡುವ ಲಸಿಕೆಗಳಿಗೂ ಆದ್ಯತೆ ನೀಡಿ ಆರೋಗ್ಯವಂತ ಮಗುವನ್ನಾಗಿ ರೂಪಿಸಲು ಪ್ರತಿಯೊಬ್ಬರೂ ಲಸಿಕೆ ಹಾಕಿಸಲು ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ, 2ನೇ ಸುತ್ತಿನ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಹುಟ್ಟಿನಿಂದ 5 ವರ್ಷದೊಳಗಡೆ ನೀಡುವ ಲಸಿಕೆಗಳನ್ನು ತಪ್ಪದೇ ಹಾಕಿಸುವ ಮೂಲಕ ಮಗುವಿನ ಬಾಲ್ಯದಲ್ಲಿ ಕಂಡುಬರುವ ಮಾರಕ ರೋಗಗಳನ್ನು ತಡೆಗಟ್ಟುವ ಮೂಲಕ ಸಧೃಡ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಜಿಲ್ಲೆಯಲ್ಲಿ ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಹನ್ನೆರಡು ಮಾರಕ ರೋಗಗಳಾದ ಪೋಲಿಯೋ, ಬಾಲಕ್ಷಯ, ಕಾಮಾಲೆ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ಹೆಚ್ ಇನ್‍ಪ್ಲುಯೆಂಜಾ, ನ್ಯೂಮೋಕೊಕಲ್ ನ್ಯೂಮೋನಿಯಾ, ರೋಟಾವೈರಸ್ ಬೇಧಿ, ದಡಾರ-ರೂಬೆಲ್ಲಾ, ಮೆದುಳು ಜ್ವರ, ಇರುಳುಗಣ್ಣು ಖಾಯಿಲೆಗಳಿಗೆ ಸಂಬಂಧಿಸಿದಂತೆ ಹುಟ್ಟಿದ ತಕ್ಷಣ ಹಾಗೂ ಮಗುವಿನ ವಯಸ್ಸು ಒಂದುವರೆ ತಿಂಗಳು, ಎರಡುವರೆ ತಿಂಗಳು, ಮೂರು ವರೆ ತಿಂಗಳು, ಒಂಬತ್ತನೆ ತಿಂಗಳು ಅವಧಿಯಲ್ಲಿ ಪೂರ್ಣವಾಗಿ ಲಸಿಕೆ ಹಾಕಲಾಗುತ್ತದೆ ತಪ್ಪದೇ ಎಲ್ಲರೂ ಮಕ್ಕಳಿಗೂ ಕೊಡಿಸಬೇಕು ಎಂದರು.
ಎರಡನೆ ವರ್ಷದಲ್ಲಿ ಬೂಸ್ಟರ್ ಡೋಸ್ ರೂಪದಲ್ಲಿ ದಡಾರ ರುಬೆಲ್ಲಾ, ಮೆದಳು ಜ್ವರ, ಪೋಲಿಯೋ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು ಮತ್ತು ಇರಳುಗಣ್ಣು ಸಂಬಂಧಿತ ಲಸಿಕೆ ನೀಡುವ ಮೂಲಕ ಸಂಪೂರ್ಣ ಲಸಿಕೆಯನ್ನು ಮಗುವಿಗೆ ಹಾಕಲಾಗುತ್ತದೆ. ಇದರಿಂದ ಬಾಲ್ಯದಲ್ಲಿ ಕಾಡುವ ಈ ಮಾರಕ ರೋಗಗಳು ಮಗುವಿಗೆ ಬರದಂತೆ ತಡೆಯಲು ಸಹಾಯಕವಾಗುವುದು. ಮಗುವಿನ ಐದರಿಂದ ಆರು ವರ್ಷದೊಳಗೆ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು ರೋಗಳಿಗೆ ಸಂಭಂಧಿಸಿದಂತೆ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲಾಗುತ್ತದೆ. ಅಲ್ಲದೆ ಮಗುವಿನ ಹತ್ತನೆ ಹಾಗೂ ಹದಿನಾರನೆ ವಯಸ್ಸಿನಲ್ಲಿ ಗಂಟಲುಮಾರಿ, ಧನುರ್ವಾಯು ಕಾಯಿಲೆಗೆ ಲಸಿಕೆ ನೀಡಲಾಗುತ್ತದೆ. ಇದರಿಂದ ಮಗುವಿನ ಆರೋಗ್ಯಕ್ಕೆ ಭದ್ರ ಬುನಾದಿ ಹಾಕಿದಂತಾಗುತ್ತದೆ ಎಂದು ಮನವರಿಕೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಜಿಲ್ಲೆಯಲ್ಲಿ 1506 ತಾಯಂದಿರು, 6541 ಮಕ್ಕಳು (0 ಯಿಂದ 2 ವರ್ಷದೊಳಗಿನ ಮಕ್ಕಳು), 128 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಒಟ್ಟು 101 ವಲಸೆ ಪ್ರದೇಶಗಳನ್ನು ಗುರ್ತಿಸಿ ಲಸಿಕೆ ಹಾಕಲಾಗುತ್ತಿದೆ. 1 ಸಂಚಾರಿ ತಂಡವು ಸೇರಿದಂತೆ 374 ಲಸಿಕಾ ಅಧಿವೇಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ತಾಯಂದಿರು ತಮ್ಮ ಮಕ್ಕಳಿಗೆ ಸಕಾಲದಲ್ಲಿ ಲಸಿಕೆಗಳನ್ನು ಹಾಕಿಸುವ ಮೂಲಕ ಆರೋಗ್ಯಯುತ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡಲು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಬಿ.ಜಾನಕಿ, ಪಾಲಿಕೆ ಸದಸ್ಯ ರಾಜಶೇಖರ, ಎಸ್.ಎಮ್.ಒ ಡಾ.ಆರ್.ಎಸ್.ಶ್ರೀಧರ್, ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಮೋಹನ ಕುಮಾರಿ, ವೈದ್ಯಾಧಿಕಾರಿ ಡಾ.ಶಗುಪ್ತಾ ಶಾಹಿನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ತಾಲ್ಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ನಸಿರ್ಂಗ್ ಅಧಿಕಾರಿ ಗಿರೀಶ್, ನಗರ ಯೋಜನಾ ವ್ಯವಸ್ಥಾಪಕ ಸುರೇಶ್, ಬಿಪಿಎಂ ಮೇಘರಾಜ್ ಸೇರಿದಂತೆ ತಾಯಂದಿರು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.