ಪರಿಣಾಮಕಾರಿ ಬೋಧನೆಗೆ ತರಬೇತಿ ಸಹಕಾರಿ

ಬೀದರ್: ಜು.29:ತರಬೇತಿ ಶಿಬಿರ ಹಾಗೂ ಕಾರ್ಯಾಗಾರಗಳು ಶಿಕ್ಷಕರಿಗೆ ಪರಿಣಾಮಕಾರಿ ಬೋಧನೆಗೆ ಸಹಕಾರಿಯಾಗಲಿವೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಹೇಳಿದರು.

ನಗರದ ನೌಬಾದ್‍ನ ಡಯಟ್‍ನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ 12 ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ತರಬೇತಿಗಳಿಂದ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗಳು, ಸುಲಭ ಬೋಧನೆ, ಕಲಿಕಾ ವಿಧಾನಗಳು, ನಾಯಕತ್ವ ಬೆಳವಣಿಗೆ, ತರಗತಿ ನಿರ್ವಹಣೆ ಸೇರಿದಂತೆ ಹೊಸ ಹೊಸ ವಿಷಯಗಳನ್ನು ಅರಿಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. 3 ರಿಂದ 8 ವರ್ಷದ ಮಕ್ಕಳ ಬುನಾದಿ ಶಿಕ್ಷಣದಲ್ಲಿ ಅಕ್ಷರ ಜ್ಞಾನದ ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಪ್ರಾಮುಖ್ಯತೆ ಕೊಡಲಾಗಿದೆ. ಶಿಕ್ಷಕರು ಹೊಸ ಶಿಕ್ಷಣ ನೀತಿಯ ಆಶಯಗಳ ಈಡೇರಿಕೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಚಾರ್ಯ ಮಹಮ್ಮದ್ ಮಕ್ಸೂದ್ ಮಾತನಾಡಿ, ಶಿಕ್ಷಕರು ತರಬೇತಿಯಲ್ಲಿ ಪಡೆದ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯಬೇಕು. ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ನುಡಿದರು.

ಶಿಬಿರಾರ್ಥಿಗಳಾದ ತ್ರಿಂಬಕ್ ಸ್ವಾಮಿ, ಕಾವೇರಿ, ಪ್ರದೀಪ್, ಫಾತಿಮಾ ತಬಸುಮ್ ತಮ್ಮ ಅನುಭವ ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಡಯಟ್ ನೋಡಲ್ ಅಧಿಕಾರಿ ಸಂತೋಷ ಪೂಜಾರಿ, ಬೆಂಗಳೂರಿನ ಆ್ಯಕ್ಟ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ನವೀನ್ ಭಟ್, ವಿವೇಕಾನಂದ, ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಝಾಕೀರ್ ಹುಸೇನ್ ಉಪಸ್ಥಿತರಿದ್ದರು.

ಉಪನ್ಯಾಸಕ ಶರಣಪ್ಪ ಕಣಜಿ ನಿರೂಪಿಸಿದರು. ಶಿವಶಂಕರ ಸ್ವಾಗತಿಸಿದರು. ಸಂಘದ ತಾಲ್ಲೂಕು ಸಂಯೋಜಕ ಗಣಪತಿ ಹಡಪದ ವಂದಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಸಹಯೋಗದಲ್ಲಿ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್, ಡಯಟ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.