ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ


ಬಳ್ಳಾರಿ,ಆ.07- ಲಸಿಕೆಯಿಂದ ವಂಚಿತರಾಗಿರುವ, ಲಸಿಕೆ ಪಡೆಯದ ಹಾಗೂ ಕಾರಣಾಂತರಗಳಿಂದ ಲಸಿಕೆ ಬಿಟ್ಟುಹೋದ ಮಕ್ಕಳನ್ನು ಹಾಗೂ ಟಿಡಿ ಲಸಿಕೆ ಪಡೆಯದ ಗರ್ಭಿಣಿಯರನ್ನು ಸಮೀಕ್ಷೆ ಮೂಲಕ ಗುರ್ತಿಸಿ ಅವರಿಗೆ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ-5.0 ಮೂಲಕ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಒಟ್ಟು ಮೂರು ಸುತ್ತಿನ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರ್‍ಸಿಹೆಚ್ ಡಾ.ಆರ್.ಅನೀಲ್ ಕುಮಾರ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ 09ನೇ ವಾರ್ಡ್ ರಾಜೇಶ್ವರಿ ನಗರದ ನಗರ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ-5.0 ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂದ್ರಧನುಷ್ ಲಸಿಕಾ ಅಭಿಯಾನ-5.0 ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ದೇಶಾದಾದ್ಯಂತ ಇಂದು ಚಾಲನೆಗೊಂಡಿದೆ. ಜಿಲ್ಲೆಯಲ್ಲೂ 3 ಸುತ್ತುಗಳಲ್ಲಿ ಅಭಿಯಾನ ನಡೆಯಲಿದೆ. ಅಭಿಯಾನವು ಆಗಸ್ಟ್(7ರಿಂದ 12ರವರೆಗೆ), ಸೆಪ್ಟೆಂಬರ್ (11ರಿಂದ 16ರವರೆಗೆ) ಮತ್ತು ಅಕ್ಟೋಬರ್ (9ರಿಂದ 14ರವರೆಗೆ) ಒಟ್ಟು ಮೂರು ತಿಂಗಳುಗಳಲ್ಲಿ ಅಭಿಯಾನ ನಡೆಯಲಿದ್ದು, ಪ್ರತಿ ತಿಂಗಳಲ್ಲಿ 6 ದಿನ ಲಸಿಕಾ ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಹನ್ನೆರಡು ಮಾರಕ ರೋಗಗಳಾದ ಪೆÇೀಲಿಯೋ, ಬಾಲಕ್ಷಯ, ಕಾಮಾಲೆ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ಹೆಚ್ ಇನ್‍ಫ್ಲುಯೆಂಚಾ, ನ್ಯೂಮೋಕೊಕಲ್ ನ್ಯೂಮೋನಿಯಾ, ರೋಟಾವೈರಸ್ ಭೇದಿ, ದಡಾರ-ರೂಬೆಲ್ಲಾ, ಮೆದುಳು ಜ್ವರ, ಇರುಳುಗಣ್ಣು ಖಾಯಿಲೆಗಳಿಗೆ ಸಂಬಂಧಿಸಿದಂತೆ ಹುಟ್ಟಿದ ತಕ್ಷಣ ಹಾಗೂ ಮಗುವಿನ ವಯಸ್ಸು ಒಂದುವರೆ ತಿಂಗಳು, ಎರಡುವರೆ ತಿಂಗಳು, ಮೂರು ವರೆ ತಿಂಗಳು, ಒಂಬತ್ತನೆ ತಿಂಗಳು ಅವಧಿಯಲ್ಲಿ ಪೂರ್ಣವಾಗಿ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.
ಎರಡನೆ ವರ್ಷದಲ್ಲಿ ಬೂಸ್ಟರ್ ಡೋಸ್ ರೂಪದಲ್ಲಿ ದಡಾರ ರುಬೆಲ್ಲಾ, ಮೆದಳು ಜ್ವರ, ಪೆÇೀಲಿಯೊ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು ಮತ್ತು ಇರಳುಗಣ್ಣು ಸಂಬಂಧಿತ ಲಸಿಕೆ ನೀಡುವ ಮೂಲಕ ಸಂಪೂರ್ಣ ಲಸಿಕೆಯನ್ನು ಮಗುವಿಗೆ ಹಾಕಲಾಗುವುದು ಇದರಿಂದ ಬಾಲ್ಯದಲ್ಲಿ ಕಾಡುವ ಈ ಮಾರಕ ರೋಗಗಳು ಮಗುವಿಗೆ ಬರದಂತೆ ತಡೆಯಲು ಸಹಾಯಕವಾಗಲಿದೆ ಎಂದರು.
ಮಗುವಿನ ಐದರಿಂದ ಆರು ವರ್ಷದೊಳಗೆ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು ರೋಗಳಿಗೆ ಸಂಬಂಧಿಸಿದಂತೆ ಸ್ಟರ್‍ಡೋಸ್ ರೂಪದಲ್ಲಿ ನೀಡಲಾಗುವುದು, ಅಲ್ಲದೆ ಮಗುವಿನ ಹತ್ತನೆ ಹಾಗೂ ಹದಿನಾರನೆ ವಯಸ್ಸಿನಲ್ಲಿ ಗಂಟಲುಮಾರಿ, ಧನುರ್ವಾಯು ಕಾಯಿಲೆಗೆ ಲಸಿಕೆ ನೀಡಲಾಗುವುದು ಇದರಿಂದ ಮಗುವಿನ ಆರೋಗ್ಯಕ್ಕೆ ಭದ್ರ ಬುನಾದಿ ಹಾಕಿದಂತಾಗುವುದು ಎಂದರು.
ಪ್ರಸ್ತುತ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನದಲ್ಲಿ ಹುಟ್ಟಿನಿಂದ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ, ನಗರದ ವಾರ್ಡ್‍ಗಳಲ್ಲಿ, ವಲಸೆ ಪ್ರದೇಶಗಳಲ್ಲಿ ಏಳು ದಿನಗಳವರೆಗೆ ಲಸಿಕೆ ನೀಡಲಾಗುತ್ತಿದ್ದು, ಅಗತ್ಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.                          *ತಾಲೂಕುವಾರು ಅಂಕಿ-ಅಂಶ:*
ಹುಟ್ಟಿನಿಂದ ಎರಡು ವರ್ಷದೊಳಗಿನ ಮಕ್ಕಳು: ಬಳ್ಳಾರಿ-2093, ಕಂಪ್ಲಿ-599, ಕುರುಗೋಡು-412, ಸಂಡೂರು-583, ಸಿರುಗುಪ್ಪ-1113 ಸೇರಿ ಒಟ್ಟು 4800.
ಎರಡು ವರ್ಷದಿಂದ ಐದು ವರ್ಷದೊಳಗಿನ ಮಕ್ಕಳು: ಬಳ್ಳಾರಿ-122, ಕಂಪ್ಲಿ-37, ಕುರುಗೋಡು-3, ಸಂಡೂರು-22, ಸಿರುಗುಪ್ಪ-15 ಸೇರಿ ಒಟ್ಟು 199.
ಒಟ್ಟು ಹುಟ್ಟಿನಿಂದ ಐದು ವರ್ಷದೊಳಗಿನ ಮಕ್ಕಳು: ಬಳ್ಳಾರಿ-2215, ಕಂಪ್ಲಿ-636, ಕುರುಗೋಡು-415, ಸಂಡೂರು-605, ಸಿರಗುಪ್ಪ-1128 ಸೇರಿ ಒಟ್ಟು 4999.
ಗರ್ಭಿಣಿ ತಾಯಂದಿರು: ಬಳ್ಳಾರಿ-593, ಕಂಪ್ಲಿ-150, ಕುರುಗೋಡು-117, ಸಂಡೂರು-175, ಸಿರಗುಪ್ಪ-299. ಸೇರಿ ಒಟ್ಟು 1334.
ಒಟ್ಟು ಲಸಿಕಾ ಅಧಿವೇಶನಗಳು: ಬಳ್ಳಾರಿ-132, ಕಂಪ್ಲಿ-24, ಕುರುಗೋಡು-21, ಸಂಡೂರು-53, ಸಿರಗುಪ್ಪ-90 ಸೇರಿ ಒಟ್ಟು 320.
ಇಂದ್ರಧನುಷ್ ಲಸಿಕಾ ಅಭಿಯಾನದಲ್ಲಿ ಲಸಿಕೆ ವಂಚಿತ ಮಕ್ಕಳ ಜೊತೆಗೆ ಆಗಸ್ಟ್ 7 ರಿಂದ 11 ರ ಅವಧಿಯಲ್ಲಿ ನೆಗಡಿಯಂತೆ ಲಸಿಕೆ ಪಡೆಯಲು ಆರ್ಹ ಮಕ್ಕಳಿಗೂ ಸಹ ಲಸಿಕೆ ಹಾಕಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ಅವರು ಮಾತನಾಡಿ, ಮಕ್ಕಳ ಉತ್ತಮ ಬೆಳವಣಿಗೆಗೆ ಲಸಿಕೆಗಳು ಉಪಯುಕ್ತವಾಗಿದ್ದು, ಪೆÇೀಷಕರು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಬೇಕು. ಇದರಿಂದ ಮಕ್ಕಳು ಶಕ್ತಿಯುತವಾಗಿ ಬೆಳೆಯುತ್ತಾರೆ ಎಂದು ತಾಯಂದಿರಿಗೆ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ-5.0 ನಿಮಿತ್ತ ಸಾಂಕೇತಿಕವಾಗಿ ಮಗುವಿಗೆ ಪೆÇೀಲಿಯೋ ಲಸಿಕೆ ಹಾಕಲಾಯಿತು. ಇದೇ ಸಂದರ್ಭದಲ್ಲಿ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ-5.0 ಜಾಗೃತಿ ಭಿತ್ತಚಿತ್ರಗಳು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪಮೇಯರ್ ಬಿ.ಜಾನಕಿ, ವಿಶ್ವ ಆರೋಗ್ಯ ಸಂಸ್ಥೆಯ ಬಳ್ಳಾರಿ ವಲಯ ಅಧಿಕಾರಿ ಡಾ.ಶ್ರೀಧರ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ ಕುಮಾರಿ, ನಗರ ಆರೋಗ್ಯಕೇಂದ್ರ ಆಡಳಿತಾಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ರಾಜೇಶ್ವರಿ ನಗರದ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಜನ್ಯ, ಸಿಬ್ಬಂದಿ ಶಾಂತಮ್ಮ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ತಾಯಂದಿರು, ಮಕ್ಕಳು ಉಪಸ್ಥಿತರಿದ್ದರು.

One attachment • Scanned by Gmail