ಪರಿಚಯಸ್ಥರ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಆರೋಪಿ ಸೆರೆ

ಬೆಂಗಳೂರು,ಏ.೧೬-ಪರಿಚಯಸ್ಥರ ಮನೆಯಲ್ಲೇ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿಯೊಬ್ಬನನ್ನು
ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು ೧೮ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಾಣವಾರದ ಸಿದ್ದಪ್ಪ (೩೮) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ೧೮ ಲಕ್ಷ ಮೌಲ್ಯದ ೧೦೨ ಗ್ರಾಂ ಚಿನ್ನ, ಇನೊವ ಕಾರು ಹಾಗೂ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.
ಕಳೆದ ಜ. ೧೮ ರಂದು ಪರಿಚಯಸ್ಥರಾಗಿದ್ದ ಬಾಗಲಗುಂಟೆಯ ಉಷಾ ಎಂಬುವರ ಮನೆಗೆ ಹೋಗಿದ್ದ ಆರೋಪಿಯು ಮನೆಯವರು ಹೊರಗೆ ಹೋದ ಸಮಯ ಸಾಧಿಸಿ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯದ ದೊಡ್ಡ ಬಾಣಸವಾಡಿ ಮೂಲದ ಆರೋಪಿಯು ೨೦೧೫ರಲ್ಲಿ ಚಿಕ್ಕಬಾಣವಾರದ ಚಂದ್ರಕಲಾ ಟೂರ್‍ಸ್ ಅಂಡ್ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಉಷಾ ಅವರಿಗೆ ಪರಿಚಯವಾಗಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ಆರೋಪಿಯು ಮನೆಯಲ್ಲಿ ಯಾರು ಇಲ್ಲದಿರುವಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಯಲಹಂಕದ ವೀರಾಂಜನೇಯಲು ಎಂಬುವರ ಇನೊವಾ ಕಾರನ್ನು ಬಾಡಿಗೆ ಪಡೆದು ೩ ತಿಂಗಳ ಕಾಲ ಬಾಡಿಗೆ ನೀಡಿ ನಂತರ ಬಾಡಿಗೆ ನೀಡದೆ ಕಾರು ಹಾಗೂ ದ್ವಿಚಕ್ರ ವಾಹನವನ್ನು ಕಳವು ಮಾಡಿರುವುದು ಪತ್ತೆಯಾಗಿದೆ. ಆರೋಪಿಯ ಬಂಧನದಿಂದ ೨ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.