ಪರಾವಲಂಬಿ ಬದುಕು ಬೇಡ ಯುವಕರಿಗೆ ಹೊಸಕೋಟೆ ಕಿವಿಮಾತು

ಕಲಬುರಗಿ,ಸೆ.12: ನಮ್ಮತನವೇ ನಮಗೆಲ್ಲರಿಗೂ ಶಕ್ತಿಯಾಗಬೇಕು. ಇನ್ನೊಬ್ಬರ ಮೇಲೆ ಅವಲಂಬಿತರಾಗಿ ಬದುಕು ಸಾಗಿಸಬಾರದು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಾಗೂ ಕನ್ನಡದ ಪ್ರಸಿದ್ಧ ಜಾನಪದ ಗಾಯಕ ಗುರುರಾಜ್ ಹೊಸಕೋಟೆ ಅವರು ಯುವಕರಿಗೆ ಕಿವಿಮಾತು ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರದಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದ ಕಲಾವಿದರು ಬೆಂಗಳೂರು, ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ. ಈ ಭಾಗದ ಸಾಹಿತ್ಯ, ಪರಂಪರೆ, ಭಾಷೆಯನ್ನು ಬಳಸಿಕೊಂಡು ಹೆಸರು ಗಳಿಸಬೇಕು. ಅಂದಾಗ ಮಾತ್ರ ಬೆಂಗಳೂರಿನವರೂ ಸಹ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ ಎಂದರು.
ಸಾಹಿತ್ಯ, ಸಂಸ್ಕøತಿಗೆ ಹೆಸರುವಾಸಿಯಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶವು ಪ್ರತಿಭಾವಂತ ಸಾಹಿತಿಗಳನ್ನು ಹೊಂದಿದೆ. ಅಂತಹ ಸಾಹಿತಿಗಳನ್ನು, ಯುವ ಕಲಾವಿದರನ್ನು ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಸೂಕ್ತ ವೇದಿಕೆ ನಿರ್ಮಿಸಿ ಕೊಡಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ಜನಪದ ಸಾಹಿತ್ಯ ನಿಜವಾದ ಮತ್ತು ಶ್ರಮದ ಬೆವರಿನೊಂದಿಗೆ ಬಂದಿದೆ. ಕಳೆದು ಹೋದ ಸಂಬಂಧಗಳನ್ನು ಒಗ್ಗೂಡಿಸುವ ಶಕ್ತಿ ಈ ಸಾಹಿತ್ಯಕ್ಕಿದೆ. ಕೇವಲ ಒಂದು ಹಳ್ಳಿ ಅಥವಾ ರಾಜ್ಯಕ್ಕಷ್ಟೇ ಸೀಮಿತವಾಗದೇ ದೇಶ, ಭಾಷೆಯನ್ನು ಮೀರಿದ ಸಾಹಿತ್ಯವಾಗಿದೆ ಎಂದು ಅಭಿಪ್ರಾಯಿಸಿದ ಅವರು, ಪರಿಷತ್ತಿನಿಂದ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಯುವ ಸಾಹಿತಿಗಳಿಗೂ ವೇದಿಕೆಯಾಗಿ ಪರಿಷತ್ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ್, ಶರಣರಾಜ್ ಛಪ್ಪರಬಂದಿ, ರವೀಂದ್ರಕುಮಾರ್ ಭಂಟನಳ್ಳಿ, ಚಲನಚಿತ್ರ ನಟ ಗಂಗಾಧರ್ ಬಡಿಗೇರ್, ಬಾಬುರಾವ್ ಪಾಟೀಲ್, ರಾಜೇಂದ್ರ ಮಾಡಬೂಳ್, ಶ್ರೀಕಾಂತ್ ಪಾಟೀಲ್ ತಿಳಗೂಳ್, ಶರಣಬಸವ ಜಂಗಿನಮಠ್, ಗಣೇಶ್ ಚಿನ್ನಾಕರ್, ನಾಗರಾಜ್ ಜಮದರಖಾನಿ, ಶಿವಶರಣ್ ಹಡಪದ್, ನರಸಿಂಗರಾವ್ ಹೇಮನೂರ್, ಶಿವಾನಂದ್ ಮಠಪತಿ, ಕಲ್ಯಾಣರಾವ್ ಪಾಟೀಲ್, ಸಿದ್ಧರಾಮ್ ಹಂಚನಾಳ್, ಸಿ.ಎಸ್. ಆನಂದ್, ಕವಿತಾ ದೇಗಾಂವ್, ಶಿಲ್ಪಾ ಜೋಶಿ, ಹೆಚ್.ಎಸ್. ಬರಗಾಲಿ, ಎಸ್.ಎಂ. ಪಟ್ಟಣಕರ್, ಪ್ರಭವ್ ಪಟ್ಟಣಕರ್, ಪತ್ರಕರ್ತರಾದ ಸಂಗಮನಾಥ್ ರೇವತಗಾಂವ್, ಶಾಮಸುಂದರ್ ಕುಲಕರ್ಣಿ, ಅಭಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.