ಪರಾರಿಯಾಗಲು ಯತ್ನಿಸಿದ ರೌಡಿಶೀಟರ್‌ಗೆ ಗುಂಡೇಟು  


ಮಂಗಳೂರು, ಜು.೧೭- ಪ್ರಕರಣವೊಂದರ ಮಹಜರಿಗೆ ತೆರಳುವ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಓರ್ವನಿಗೆ ಪೊಲೀಸ್ ಸಿಬ್ಬಂದಿ ಫೈರಿಂಗ್ ನಡೆಸಿರುವ ಘಟನೆ ಕೊಣಾಜೆ‌ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ಆದಿತ್ಯವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬಂದಿ ಗಾಯಗೊಂಡಿದ್ದಾರೆ.
14ಕ್ಕೂ ಅಧಿಕ ಪ್ರಕರಣ ಇರುವ ರೌಡಿಶೀಟರ್ ಮುಖ್ತಾರ್ ಮೇಲೆ ಫೈರಿಂಗ್ ನಡೆದಿದೆ. ಫೈರಿಂಗ್ ವೇಳೆ ಉಳ್ಳಾಲ ಠಾಣಾ ಪೊಲೀಸ್ ಸಿಬ್ಬಂದಿ ವಾಸುದೇವ ಹಾಗೂ ಅಕ್ಬರ್ ಎಂಬವರು ಗಾಯಗೊಂಡಿದ್ದಾರೆ. ಆರೋಪಿ ಮುಖ್ತಾರ್ ಹಲವು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ. ಆದರೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆತನನ್ನು ನಿನ್ನೆ ಉಳ್ಳಾಲ ಪೊಲೀಸರು ಬಂಧಿಸಿದ್ದರು. ಇಂದು ಮುಂಜಾನೆ ಬೈಕಿನ ಮಹಜರಿಗೆಂದು ಕೊಣಾಜೆ ಸಮೀಪದ ಅಸೈಗೋಳಿಗೆ ಕರೆದೊಯ್ದಿದ್ದ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಠಾಣಾಧಿಕಾರಿ ಸಂದೀಪ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಕಾಲಿಗೆ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಪೊಲೀಸ್ ಸಿಬ್ಬಂದಿದಿ ಹಾಗೂ ಆರೋಪಿಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‍ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.