ಪರಾಗ್ ಟ್ವಿಟರ್ ನೂತನ ಸಿಇಓ

ನವದೆಹಲಿ, ನ.೩೦- ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಭಾರತ ಮೂಲದ ಪರಾಗ್ ಅಗರವಾಲ್ ನೇಮಕಗೊಂಡಿದ್ದಾರೆ.

ನಿಕಟಪೂರ್ವ ಸಿಇಒ ಜಾಕ್ ಡಾರ್ಸಿ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಆ ಸ್ಥಾನವನ್ನು
ಪರಾಗ್ ಅಗರವಾಲ್ ಅಲಂಕರಿಸಿದ್ದಾರೆ. ವಿಶ್ವದ ಪ್ರಮುಖ ೫೦೦ ಉನ್ನತ ಕಂಪನಿಗಳ ಸಿಇಒಗಳಲ್ಲಿ ಅಗರವಾಲ್? ಅತಿ ಕಿರಿಯ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಗರವಾಲ್ ಐಐಟಿ-ಬಾಂಬೆ ಹಳೆ ವಿದ್ಯಾರ್ಥಿಯಾಗಿದ್ದು, ಅವರು ಸ್ಟಾನ್‌ಫೋರ್ಡ್‌ನಲ್ಲಿ ಅಧ್ಯಯನ ಮಾಡಲು ಹೋಗಿದ್ದರು. ೨೦೧೧ರಲ್ಲಿ ಟ್ವಟರ್‌ಗೆ ಸೇರುವ ಮೊದಲು ಮೈಕ್ರೊಸಾಫ್ಟ್ ಯಾಹೂ ಹಾಗೂ ಎಟಿ-ಟಿ ಯಲ್ಲಿ ಕಾರ್ಯನಿರ್ವಹಿಸಿದ್ದರು. ಅಮೆರಿಕದ ಸ್ಯಾನ್ ಫೋರ್ಡ್ ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಜೊತೆಗೆ, ಟ್ವಿಟರ್ ನಲ್ಲಿ ಪದೋನ್ನತಿ ಪಡೆದು ೨೦೧೮ರಲ್ಲಿ ತಂತ್ರಜ್ಞಾನ ವಿಭಾಗದ ಮುಖ್ಯ ಅಧಿಕಾರಿಯಾಗಿ ನೇಮಕವಾಗಿದ್ದರು. ಮರು ವರ್ಷ ಪ್ರಾಜೆಕ್ಟ್ ಬ್ಲೂ ಸ್ಕೈ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಬಾಂಬೆ ಐಐಟಿಯ ಪದವೀಧರನಿಗೆ ಅಂತಾರಾಷ್ಟ್ರೀಯ ಮಟ್ಟದ ಮಹತ್ವದ ಸ್ಥಾನವೊಂದು ಒಲಿದಂತಾಗಿದೆ.

ಕಂಪನಿ ತೋರಿರುವ ವಿಶ್ವಾಸ ಹಾಗೂ ಬೆಂಬಲದ ಕುರಿತು ಸುದೀರ್ಘ ಪತ್ರವೊಂದನ್ನು ಬರೆದು ನೂತನ ಸಿಇಓ ಪರಾಗ್ ಧನ್ಯವಾದ ತಿಳಿಸಿದ್ದಾರೆ.

೨೦೦೬ರಲ್ಲಿ ಆರಂಭವಾದ ಟ್ವಿಟರ್ ಜನಪ್ರಿಯ ಜಾಲತಾಣವಾಗಿದ್ದು, ೩೩ ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ವಾರ್ಷಿಕ ೨೮ ಸಾವಿರ ಕೋಟಿ ರೂಪಾಯಿ ಆದಾಯ ಹೊಂದಿದೆ.

ಅಲ್ಲದೆ, ಈಗಾಗಲೇ ಗೂಗಲ್ ಸೇರಿದಂತೆ ಹಲವು ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯ ಮೂಲದವರು ಸಿಇಒ ಆಗಿದ್ದಾರೆ. ಈಗ ಭಾರತಕ್ಕೆ ಮತ್ತೊಂದು ಗರಿ ಸಂದಿದೆ.

ಸುಂದರ್ ಪಿಚೈ ಗೂಗಲ್ ಸಿಇಒ ಆಗಿದ್ದು, ಇಂದಿರಾ ನೂಯಿ ಅವರು ಪೆಪ್ಸಿಕೋ, ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜೀವ್ ಸೂರಿ -ನೋಕಿಯಾ, ಶಂತನು ನಾರಾಯಣ ಅವರು ಆಡೋಬ್ ಸಿಇಒ, ಸಂಜಯ್ ಝಾ ಅವರು ಗ್ಲೋಬಲ್ ಫೌಂಡರೀಸ್, ಅಜಯ್ ಪಾಲ್ ಸಿಂಗ್ ಭಂಗ ಅವರು ಮಾಸ್ಟರ್ ಕಾರ್ಡ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.