ಪರಹಿತದಲ್ಲಿ ದೈವತ್ವವನ್ನು ಕಂಡ ಗುರುನಾನಕರು

ಕಲಬುರಗಿ: ನ.19:ಸತ್ಯ, ತ್ಯಾಗ, ಆಧ್ಯಾತ್ಮಿಕತೆÀ, ಸಾಮಾಜಿಕ ಕಳಕಳಿ, ಸಹೋದರ ಭಾತೃತ್ವವನ್ನು ಸಾರಿದ ಮಹಾನ ದಾರ್ಶನಿಕ, ಗುರುನಾನಕ ಅವರು, ಇಡೀ ತಮ್ಮ ಜೀವನದುದ್ದಕ್ಕು ಬಡವರು, ಅಸಹಾಯಕರ ಸೇವೆಯನ್ನು ಮಾಡುವ ಮೂಲಕ ಪರಹಿತದಲ್ಲಿಯೇ ದೈವತ್ವವನ್ನು ಕಂಡ ಶ್ರೇಷ್ಠ ಸಮಾಜ ಸುಧಾರಕರಾಗಿದ್ದಾರೆ ಎಂದು ಉಪನ್ಯಾಸಕ, ಪ್ರಗತಿಪರ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯಲ್ಲಿರುವ ಶಿವ ನಗರದಲ್ಲಿರುವ 'ಎಂ.ಎಂ.ಎನ್. ಟ್ಯೂಟೋರಿಯಲ್ಸ್'ನಲ್ಲಿ, 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ 'ಗುರುನಾನಕರ 552ನೇ ಜಯಂತಿ'ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಗುರುನಾನಕರು ಬಾಲ್ಯದಲ್ಲಿಯೇ ಆಧ್ಯಾತ್ಮಿಕ ವಿಷಯದ ಕಡೆ ತಮ್ಮ ಒಲುವನ್ನು ತೋರಿಸುತ್ತಿದ್ದರು. ಸಮಾಜ ಸೇವೆ ಮಾಡಬೇಕೆಂಬುದು ಅವರಲ್ಲಿ ಸದಾತುಡಿಯುತ್ತಿತ್ತು. ಎಲ್ಲೆಡೆ ಸಂಚರಿಸಿ ಸಮಾಜದಲ್ಲಿ ತುಂಬಿರುವ ಅಂಧಾನುಕರುಣೆಯ ಬಗ್ಗೆ ಜನರಿಗೆ ತಿಳಿಸಿಕೊಟ್ಟು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದರು. ವ್ಯಕ್ತಿ ಯಾವುದೇ ಧರ್ಮದಲ್ಲಿ ಜನಿಸಿರಬಹುದು, ಆದರೆ, ಎಲ್ಲರಲ್ಲಿ ದೇವರ ಅಸ್ತಿತ್ವವಿದೆ. ಪ್ರತಿಯೊಬ್ಬರಲ್ಲಯೂ ದೈವತ್ವವನ್ನು ಕಾಣಬೇಕು. ದೇವರು ಒಬ್ಬನೇ ಇದ್ದಾನೆ. ಪ್ರತಿಯೊಬ್ಬರು ಸತ್ಯ, ನ್ಯಾಯ, ಧರ್ಮದ ಮಾರ್ಗದಲ್ಲಿ ನಡೆಯಬೇಕು. ಎಲ್ಲರನ್ನು ಸಮಾನತೆಯಿಂದ ಕಾಣಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ಭಾತೃತ್ವ ಭಾವನೆಯಿಂದ ಇರಬೇಕು. ದೇವರ ಹೆಸರಿನ ಮೇಲೆ ಶೋಷಣೆಜರುಗಬಾರದು ಎಂಬ ಸಂದೇಶ ಸಾರ್ವಕಾಲಿಕವಾಗಿವೆ ಎಂದರು. ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಗುರುನಾನಕರು ‘ಸಿಖ್ ಧರ್ಮ’ವನ್ನು ಹುಟ್ಟು ಹಾಕಿದರು. ‘ಗುರುಗ್ರಂಥ ಸಾಹೇಬ್’ವು ಧರ್ಮಗ್ರಂಥವಾಗಿದೆ. ಅವರು ಸಮಾಜಕ್ಕೆ ನೀಡಿರುವ ಭಾತೃತ್ವದ ಸಂದೇಶದಿಂದ ಭಯೋತ್ಪಾದನೆಯಿಂದ ಹೊತ್ತಿ ಉರಿಯುತ್ತಿರುವ ಇಂದಿನ ಜಗತ್ತಿಗೆ ಶಾಂತಿ ದೊರಕಲು ಸಾಧ್ಯವಾಗುತ್ತದೆ ಎಂದು ನುಡಿದರು.

ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಪರಮೇಶ್ವರ ದೇಸಾಯಿ, ಸಿದ್ದರಾಮ ತಳವಾರ, ಬಸವಣ್ಣಪ್ಪ ಶೀರಿ, ಓಂಕಾರ ಗೌಳಿ,ವಿನೋದ ಎಸ್.ಮಾಳಾ, ಚರಣ ಚಿಮ್ಮಾದಿ, ಆಕಾಶ ಜಾನಕರ್, ಆದಿತ್ಯ ವಿ.ಅಂಬಲಗಿ ಸೇರಿದಂತೆ ಮತ್ತಿತರರು ಇದ್ದರು.