ಪರಸ್ಪರ ಖೆಡ್ಡಾ ತೋಡಲು ಸಿದ್ದು-ಡಿಕೆಶಿ ಬಣ ಸಜ್ಜು

ತುಮಕೂರು, ನ. ೨೬- ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಇನ್ನು ಯಾರಿಗೆ ಎಷ್ಟು ಸೀಟು ಎನ್ನುವುದು ನಿರ್ಧಾರವಾಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ರಾತ್ರಿ ಭೇಟಿ ನೀಡಿ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಜೆಡಿಎಸ್ ವರಿಷ್ಠರಾದ ದೇವೇಗೌಡರು ಯಾರಿಗೆ ಎಷ್ಟು ಸೀಟು ಎನ್ನುವ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.
ಮೊದಲು ಲೋಕಸಭಾ ಚುನಾವಣೆಗೆ ನಮ್ಮ ಪಕ್ಷದಿಂದ ೨೪-೨೫ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೆವು. ಈ ಬಾರಿ ೨೮ ಕ್ಷೇತ್ರಗಳಲ್ಲಿಯೂ ಟಫ್ ಫೈಟ್ ಕೊಡುತ್ತೇವೆ ಎಂದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಿ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಡಿ. ೪ ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಬರಗಾಲದ ವಿಚಾರವನ್ನು ಮೊದಲಿಗೆ ಎತ್ತಿಕೊಳ್ಳಲಿದ್ದೇವೆ. ರೈತರು, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರದ ವಿರುದ್ಧ ಚಾಟಿ ಬೀಸುತ್ತೇವೆ ಎಂದರು.
ರೈತರು ವಿದ್ಯುತ್ ಪರಿವರ್ತಕ ಅಳವಡಿಸಿಕೊಂಡ ವೇಳೆ ಗ್ರೌಂಡಿಂಗ್‌ಗೆ ಉಪ್ಪನ್ನು ಸಹ ರೈತರೆ ಕೊಡಬೇಕಾದ ಪರಿಸ್ಥಿತಿ ಇದೆ. ಇವರ ಯೋಗ್ಯತೆಗೆ ಕನಿಷ್ಠ ಉಪ್ಪು ಕೊಡಲು ಸಹ ಆಗುತ್ತಿಲ್ಲ. ಇಂತಹ ಸರ್ಕಾರ ಇದ್ದರೆಷ್ಟು ಬಿಟ್ರೆಷ್ಟು ಎಂದು ಜನ ಶಾಪ ಹಾಕುತ್ತಿದ್ದಾರೆ ಎಂದರು.
ರೈತರ ಸಾಲ ಮನ್ನಾ ಮಾಡಬೇಕು ಎಂದು ಹೇಳುತ್ತಿದ್ದಾರೆ. ರೈತರ ಸಮಸ್ಯೆ ಏನು ಎನ್ನುವುದನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳುತ್ತಿದ್ದೇವೆ. ಇವೆಲ್ಲ ಬೆಳವಣಿಗೆಯನ್ನು ನೋಡಿದರೆ ಸರ್ಕಾರ ಗೋವಿಂದ ಆಗಲಿದೆ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಒಂದು ಗ್ಯಾಂಗ್ ರೆಡಿ ಆಗಿ ಕೂತಿದೆ. ಅದು ಡಿಕೆಶಿ ಅವರ ಗ್ಯಾಂಗ್, ಇನ್ನೊಂದೆಡೆ ಡಿಕೆಶಿ ಅವರನ್ನು ಸಿಕ್ಕಿ ಹಾಕಿಸಲು ಸಿದ್ದರಾಮಯ್ಯನವರು ಪರಮೇಶ್ವರ್ ಅವರ ಮನೆಯಲ್ಲಿ ಸಭೆ ಮಾಡಿದ್ದಾರೆ. ನಾಲ್ಕು ಜನ ಸೇರಿ ಡಿಕೆಶಿಗೆ ಖೆಡ್ಡಾ ತೋಡಲು ರೆಡಿ ಮಾಡಿದ್ದಾರೆ ಎಂದ ಅವರು, ಈ ಹಿಂದಿನ ಮೈತ್ರಿ ಸರ್ಕಾರವನ್ನು ಬೀಳಿಸಲು ಸಹ ಬೆಳಗಾವಿಯಲ್ಲೇ ಪ್ಲಾನ್ ಆಗಿತ್ತು. ಈಗಲೂ ಸಹ ಅಲ್ಲಿಂದಲೇ ಇದರ ತಯಾರಿ ನಡೆಯುತ್ತಿದೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಶೇ. ೧೦೦ಕ್ಕೆ ಶೇ. ೯೮ ರಷ್ಟು ಯಾರೂ ಅಸಮಾಧಾನಿತರಿಲ್ಲ. ಒಂದಿಬ್ಬರು ಅಥವಾ ಮೂವರು ಇರಬೇಕು ಅಷ್ಟೆ. ಈಗಾಗಲೇ ಸಿ.ಟಿ. ರವಿ ಅವರನ್ನು ನಮ್ಮ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಭೇಟಿ ಮಾಡಿದ್ದಾರೆ. ಹಾಗೆಯೇ ರಮೇಶ್ ಜಾರಕಿಹೊಳಿ ಅವರ ಮನೆಗೆ ಹೋಗಿ ಮಾತುಕತೆ ನಡೆಸಿದ್ದಾರೆ. ಹಾಗಾಗಿ ಈಗ ಇರುವಂತಹದ್ದು ಇಬ್ಬರು ಅಥವಾ ಮೂವರು ಅಸಮಾಧಾನಿತರಷ್ಟೇ. ಅವರನ್ನು ಕೂಡಾ ೧೦ ದಿನದೊಳಗೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಭೇಟಿ ಮಾಡಿ ಮಾತನಾಡುತ್ತಾರೆ. ಜತೆಗೆ ನಾನು ಸಹ ಅವರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುತ್ತೇನೆ ಎಂದರು.