ವಾಷಿಂಗ್ಟನ್, ಜೂ.೨೨- ಈಗಾಗಲೇ ಮೂರು ದಿನಗಳ ಅಮೆರಿಕಾ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಧ್ಯಕ್ಷ ಜೋ ಬೈಡೆನ್ ಹಾಗೂ ಜಿಲ್ ಬೈಡೆನ್ ಇಂದು ಶ್ವೇತಭವನಕ್ಕೆ ಆತ್ಮೀಯವಾಗಿ ಬರಮಾಡಿಕೊಂಡು, ಔತಣಕೂಟ ಆಯೋಜಿಸಿದ್ದರು. ಈ ವೇಳೆ ಮೋದಿ ಹಾಗೂ ಬೈಡೆನ್ ಅವರು ಪರಸ್ಪರರಿಗೆ ಉಡುಗೊರೆ ನೀಡುವ ಮೂಲಕ ಗೌರವಿಸಿದರು. ಭಾರತ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ಧೋವಲ್ ಹಾಗೂ ಅಮೆರಿಕಾದ ಎನ್‌ಎಸ್‌ಎ ಜ್ಯಾಕ್ ಸುಲ್ಲಿವಾನ್ ಜೊತೆಗಿದ್ದರು.
ಶ್ವೇತಭವನದಲ್ಲಿ ನಡೆದ ಔತಣಕೂಟ ಸಮಾರಂಭದ ವೇಳೆ ಅಧಿಕೃತ ಉಡುಗೊರೆಯಾಗಿ ಪ್ರಧಾನಿ ಮೋದಿಯವರು ಅಧ್ಯಕ್ಷ ಜೋ ಬಿಡನ್ ಅವರಿಗೆ ಕರಕುಶಲ ಶ್ರೀಗಂಧದ ಪೆಟ್ಟಿಗೆಯನ್ನು ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್‌ಗೆ ೭.೫ ಕ್ಯಾರೆಟ್‌ನ ಪರಿಸರ ಸ್ನೇಹಿ ಹಸಿರು ವಜ್ರವನ್ನು ನೀಡಿದರು. ನವೆಂಬರ್‌ನಲ್ಲಿ ೮೧ನೇ ವರ್ಷಕ್ಕೆ ಕಾಲಿಡುತ್ತಿರುವ ಅಧ್ಯಕ್ಷ ಬಿಡೆನ್‌ಗೆ ಉಡುಗೊರೆಯಾಗಿ ಮೋದಿಯವರು ನೀಡಿದ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೆಳ್ಳಿಯ ಗಣೇಶನ ವಿಗ್ರಹ, ದಿಯಾ (ಎಣ್ಣೆ ದೀಪ) ಮತ್ತು ’ದಾಸ ದಾನಂ’ ಇದೆ. “ದಾಸ ದಾನ” ಎಂದರೆ ಒಬ್ಬ ವ್ಯಕ್ತಿಯು ೮೦ ವರ್ಷ ಮತ್ತು ಎಂಟು ತಿಂಗಳುಗಳನ್ನು ಪೂರೈಸಿದ ನಂತರ ಒಂದು ಸಾವಿರ ಹುಣ್ಣಿಮೆಗಳನ್ನು ನೋಡಿದ ವ್ಯಕ್ತಿಯಾದಾಗ ಮಾಡಿದ ದಾನಗಳನ್ನು ಸೂಚಿಸುತ್ತದೆ. ಇದೂ ಅಲ್ಲದೆ ಪ್ರಧಾನಮಂತ್ರಿಯವರು ಜೋ ಬಿಡೆನ್ ಅವರಿಗೆ ’ದಿ ಟೆನ್ ಪ್ರಿನ್ಸಿಪಾಲ್ ಉಪನಿಷದ್’ ಪುಸ್ತಕದ ಮೊದಲ ಆವೃತ್ತಿಯ ಮುದ್ರಣದ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು. ಅತ್ತ ಜಿಲ್ ಬಿಡೆನ್‌ಗೆ ಉಡುಗೊರೆಯಾಗಿ ನೀಡಿದ ವಜ್ರವನ್ನು ಕರ್-ಎ-ಕಲಮ್ದಾನಿ ಎಂದು ಕರೆಯಲ್ಪಡುವ ಕಾಗದದ ತಿರುಳಿನಿಂದ ಮಾಡಿದ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಅಲ್ಲದೆ ಇದೇ ವೇಳೆ ಕೈಯಿಂದ ತಯಾರಿಸಿದ, ಪುರಾತನ ಅಮೆರಿಕನ್ ಪುಸ್ತಕ ಗ್ಯಾಲಿಯನ್ನು ಪ್ರಧಾನಿ ಮೋದಿಯವರು ಬೈಡೆನ್‌ರಿಂದ ಸ್ವೀಕರಿಸಿದರು. ಅಲ್ಲದೆ ಒಂದು ಕಾಲದ ಅಮೆರಿಕಾದ ಖ್ಯಾತ ಕ್ಯಾಮೆರಾದಿಂದ ತೆಗೆದ ವನ್ಯಜೀವಿ ಚಿತ್ರಗಳ ಪುಸ್ತಕದ ಹಾರ್ಡ್‌ಕವರ್ ಹಾಗೂ ’ರಾಬರ್ಟ್ ಫ್ರಾಸ್ಟ್‌ನ ಕಲೆಕ್ಟೆಡ್ ಗೀತೆಗಳನ್ನು ಒಳಗೊಂಡಂತೆ ಸಹಿ ಮಾಡಿದ ಮೊದಲ ಆವೃತ್ತಿಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು. ಇನ್ನು ಭಾರತೀಯ ಕಾಲಮಾನ ಇಂದು ಮಧ್ಯಾಹ್ನದ ವೇಳೆಗೆ ಮೋದಿಯವರು ಅಮೆರಿಕಾದ ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.