ಪರವೂರಿನ ಕಾರ್ಮಿಕರಿಗೆ ಆಶ್ರಯ ತಾಣವಾದ ಪುತ್ತೂರು ದೇವಳ

ಪುತ್ತೂರು, ಮೇ ೧೯- ದೇಶವನ್ನು ಕಿತ್ತು ತಿನ್ನುತ್ತಿರುವ ಕೊರೊನಾ ಎಂಬ ಹೆಮ್ಮಾರಿಯಿಂದ ಜನಸಾಮಾನ್ಯರ ಬದುಕು ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಇಳಿಮುಖ ಕಂಡುಬರುತ್ತಿಲ್ಲ. ಸರ್ಕಾರ ಹಲವಾರು ಪ್ರಯತ್ನಗಳನ್ನು ನಡೆಸುತ್ತಿದ್ದರೂ ದೊಡ್ಡ ಮಟ್ಟದಲ್ಲಿ ಫಲ ನೀಡುತ್ತಿಲ್ಲ. ಈ ನಡುವೆ ಬಡ ವರ್ಗ ಮತ್ತು ಮಧ್ಯಮ ವರ್ಗದ ಜನತೆ ಆರ್ಥಿಕ ಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪುತ್ತಿದೆ. ಎಷ್ಟೋ ಕಾರ್ಮಿಕರು ತುತ್ತು ಅನ್ನಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೊರೊನಾ ಲಾಕ್ ಡೌನ್ ನಿಂದ ಊರಿಗೆ ತೆರಳಲಾಗದೆ ಪುತ್ತೂರಿನಲ್ಲಿಯೇ ಉಳಿದಿರುವ ಸುಮಾರು ೫೦ ಮಂದಿ ಕಾರ್ಮಿಕರಿಗೆ ಇದೀಗ ಪುತ್ತೂರು ದೇವಳ ಆಶ್ರಯ ತಾಣವಾಗಿದೆ.
ಪುತ್ತೂರು ದೇವಳ ಕೊರೊನಾ ಹಿನ್ನಲೆಯಲ್ಲಿ ತಾತ್ಕಾಲಿಕ ಉಪಚಾರ ಕೇಂದ್ರವನ್ನು ಪ್ರಾರಂಭಿಸಿದ್ದು, ಈ ಕೇಂದ್ರದಲ್ಲಿ ಇದೀಗ ಪರವೂರಿನ ೫೦ ಮಂದಿಗೆ ವಾಸ್ತವ್ಯ ಹಾಗೂ ಊಟೋಪಚಾರ ನೀಡುವ ಕಾಯಕ ನಡೆಸುತ್ತಿದೆ. ಪುತ್ತೂರು
ಜಾತ್ರೆಗೆ ಮೈಸೂರು ಮತ್ತು ಮಹರಾಷ್ಟ್ರ ಭಾಗದ ಕಾರ್ಮಿಕರು ಮನೋರಂಜನಾ ಪರಿಕರಗಳನ್ನು ತಂದಿದ್ದರು. ಆದರೆ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಅವರು ಪುತ್ತೂರಿನಲ್ಲೇ ಉಳಿಯಬೇಕಾಯಿತು. ಇದೀಗ ಮತ್ತೆ ಸೆಮಿ ಲಾಕ್‌ಡೌನ್ ಸ್ಥಿತಿಯಿಂದ ಈ ಕಾರ್ಮಿಕರಿಗೆ ತುತ್ತು ಅನ್ನಕ್ಕೂ ತತ್ವಾರ ಉಂಟಾಗಿತ್ತು. ದೇವಳದ ಆವರಣದಲ್ಲಿಯೇ ಉಳಿಯಬೇಕಾದ ಅನಿವಾರ್ಯತೆಯೂ ಎದುರಾಗಿತ್ತು. ಇದನ್ನು ಮನಗಂಡು ದೇವಳದ ವತಿಯಿಂದ ನಿರ್ಮಿಸಲಾದ ತಾತ್ಕಾಲಿಕ ಉಪಚಾರ ಕೇಂದ್ರದಲ್ಲಿ ಈ ಕಾರ್ಮಿಕರಿಗೆ ವ್ಯವಸ್ಥೆ ಮಾಡಲಾಗಿದೆ.
ಇದೀಗ ೪೨ ಕೋಣೆಗಳ ಈ ಉಪಚಾರ ಕೇಂದ್ರದಲ್ಲಿ ಕಾರ್ಮಿಕರು ಆಶ್ರಯ ಪಡೆದುಕೊಂಡಿದ್ದಾರೆ. ಇದರ ನಡುವೆ ಕೊರೊನಾ ಚಿಕಿತ್ಸಾ ಕೇಂದ್ರವನ್ನಾಗಿಯೂ ಈ ಕೇಂದ್ರವನ್ನು ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ. ಪ್ರತ್ಯೇಕ ಕೊಠಡಿ, ಹಾಸಿಗೆ ವ್ಯವಸ್ಥೆ, ಊಟೋಪಚಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಐಸೋಲೇಶನ್ ವಾರ್ಡ್‌ಗೆ ದಾದಿಯರು ಹಾಗೂ ವೈದ್ಯರ ಸೌಲಭ್ಯವನ್ನೂ ಮಾಡಲಾಗಿದೆ.
ಕೊರೊನಾ ರೋಗಿಗಳು-ಕಾರ್ಮಿಕರಿಗೆ ಆಶ್ರಯ
ಪುತ್ತೂರು ಜಾತ್ರಾ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ಸ್ಟಾಲ್‌ಗಾಗಿ ಮಹಾಲಿಂಗೇಶ್ವರ ದೇವಳದ ಆವರಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಈ ತಾತ್ಕಾಲಿಕ ಅಂಗಡಿಗಳನ್ನೇ ವ್ಯವಸ್ಥಿತ ರೀತಿಯಲ್ಲಿ ಐಸೋಲೇಶನ್ ವಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗಿದೆ. ಆದರೆ ಜಾತ್ರೆ ಮುಗಿದ ತಕ್ಷಣವೇ ಲಾಕ್ ಡೌನ್ ಜಾರಿಗೊಂಡ ಹಿನ್ನಲೆಯಲ್ಲಿ ದೂರದ ಊರಿನಿಂದ ಮನೋರಂಜನೆಯ ಪರಿಕರ ತೆಗೆದುಕೊಂಡು ಬಂದಿದ್ದ ೫೦ಕ್ಕೂ ಮಿಕ್ಕಿ ಕಾರ್ಮಿಕರು ಇಲ್ಲೇ ಉಳಿಯುವಂತಾಗಿತ್ತು. ಅವರಿಗೂ ವಸತಿ-ಊಟೋಪಚಾರಗಳ ವ್ಯವಸ್ಥೆ ಮಾಡಲಾಗಿದೆ. ದೇವಳದ ನಿತ್ಯ ಕರಸೇವಕರೇ ಇಲ್ಲಿನ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.