ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಜಾಹೀರಾತು ಪ್ರದರ್ಶಿಸುವಂತಿಲ್ಲ:ಯಶವಂತ‌ ವಿ. ಗುರುಕರ್

ಕಲಬುರಗಿ,ಏ.14: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಪ್ರಾಧಿಕಾರದ ಲಿಖಿತ ಅನುಮತಿಯಿಲ್ಲದೆ ಯಾವುದೇ ವ್ಯಕ್ತಿ ಸಾರ್ವಜನಿಕರ ವೀಕ್ಷಣೆಗೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಜಾಹೀರಾತನ್ನು ನಿರ್ಮಿಸುವುದಾಗಲಿ, ಕೆತ್ತಿಸುವುದಾಗಲಿ ಅಥವಾ ಪ್ರದರ್ಶಿಸುವಂತಿಲ್ಲ‌ ಎಂದು ಜಿಲ್ಲಾ ‌ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.

ಈ ಕೆಲಸಕ್ಕೆ ಯಾವುದೇ ವ್ಯಕ್ತಿಯು ಯಾವುದೇ ರೀತಿಯಲ್ಲಿ ಸಹಕರಿಸಬಾರದು. ಇದು ಚುನಾವಣಾ ಆಯೋಗದ ಸೂಚನೆ ಉಲ್ಲಂಘಿಸಿದಂತಾಗುತ್ತದೆ ಎಂದಿರುವ ಜಿಲ್ಲಾಧಿಕಾರಿಗಳು, ಈ ಆದೇಶ‌ ವಿಧಾನಸಭೆ‌ಚುನಾವಣಾ ಮುಕ್ತಾಯದ ವರೆಗೆ ಜಿಲ್ಲೆಯಾದ್ಯಂತ ಜಾರಿಯಲ್ಲಿರುತ್ತದೆ ಎಂದಿದ್ದಾರೆ.

ಸೂಪ್ತ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಜಾಹೀರಾತು ಪ್ರದರ್ಶನದ ಮೂಲಕ ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿದಲ್ಲಿ ಅಂತಹ ವಿರೂಪಗೊಳಿಸುವಿಕೆ ತೆಗೆಯಲು ಮತ್ತು ಮರುಸ್ಥಾಪನೆಯ ಸಂಪೂರ್ಣ ವೆಚ್ಚವನ್ನು ಸಂಬಂಧಿಸಿದ ವ್ಯಕ್ತಿಯಿಂದ ವಸೂಲಿ ಮಾಡುವುದಲ್ಲದೆ ಅಂತಹರ ಮೇಲೆ ಚಾಲ್ತಿಯಲ್ಲಿರುವ ಕಾಯ್ದೆಗಳಂತೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿ.ಸಿ. ತಿಳಿಸಿದ್ದಾರೆ.

ಈ ಆದೇಶದ ಉಲ್ಲಂಘನೆಯಿಂದ ಯಾರಿಗಾದರೂ ಅಡಚಣೆ, ಹಾನಿ, ಕಿರಿಕಿರಿ ಅಥವಾ ಗಾಯ ಇತ್ಯಾದಿಗಳನ್ನು ಉಂಟುಮಾಡಿದರೆ ಅಥವಾ ಮಾನವನ ಜೀವನ, ಆರೋಗ್ಯ ಅಥವಾ ಸುರಕ್ಷತೆ ಅಥವಾ ಗಲಭೆ ಅಥವಾ ಗಲಭೆಗೆ ಬೆದರಿಕೆಯನ್ನು ಉಂಟುಮಾಡುವ ಪ್ರವೃತ್ತಿಗಳನ್ನು ಸೆಕ್ಷನ್ 188 ಐ.ಪಿ.ಸಿ ಅಡಿಯಲ್ಲಿ ಪ್ರತ್ಯೇಕವಾಗಿ ಅಪರಾಧವನ್ನು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಸಿ. ಯಶವಂತ ವಿ. ಗುರುಕರ್ ಎಚ್ಚರಿಕೆ ನೀಡಿದ್ದಾರೆ.