ಪರವಾನಿಗೆ ಇಲ್ಲದೆ ಧ್ವನಿವರ್ಧಕ ಬಳಸುವಂತಿಲ್ಲ:ಯಶವಂತ ವಿ. ಗುರುಕರ್

ಕಲಬುರಗಿ,ಏ.10:ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲಿ ಸಂಬಂಧಿಸಿದ ಪ್ರಾಧಿಕಾರದ ಪರವಾನಿಗೆ ಇಲ್ಲದೆ ಯಾವುದೇ ವ್ಯಕ್ತಿ ಧ್ವನಿವರ್ಧಕ (ಲೌಡ್ ಸ್ಪೀಕರ್), ಸ್ಥಿರ ಅಥವಾ ಮೊಬೈಲ್ ವಿಧಾನದಲ್ಲಿ ಸಾರ್ವಜನಿಕರನ್ನು ಸಂಬೋಧಿಸಲು ಬಳಸುವ ಸಾಧನ, ವಾಹನದಲ್ಲಿ ಅಳವಡಿಸಿದ ಧ್ವನಿವರ್ಧಕ ಅಥವಾ ಪಟಾಕಿ ಸಿಡಿಸುವುದನ್ನು ನಿರ್ಭಂಧಿಸಿ ಜಿಲ್ಲಾಧಿಕಾರಿ ಮತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.
ಒಂದು ವೇಳೆ ಧ್ವನಿವರ್ಧಕ ಬಳಕೆಗೆ ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದಲ್ಲಿ, ಸ್ಥಳ ಮತ್ತು ಬಳಕೆ ಹಾಗೂ ವಾಹನದ ವಿವರವನ್ನು ಸ್ಥಳೀಯ ಪೊಲೀಸ್ ಇಲಾಖೆ ಮತ್ತು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಹನಕ್ಕಾಗಿ ಒಳಾಂಗಣ ಸಭಾಂಗಣ, ಕಾನ್ಫೆರೆನ್ಸ್ ಹಾಲ್ ಹಾಗೂ ಸಮುದಾಯ ಭವನಗಳನ್ನು ಹೊರತುಪಡಿಸಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಯಾವುದೇ ಲೌಡ್ ಸ್ಪೀಕರ್, ಸ್ಥಿರ ಅಥವಾ ಮೊಬೈಲ್ ವಿಧಾನದಲ್ಲಿ ಸಾರ್ವಜನಿಕರನ್ನು ಸಂಬೋಧಿಸಲು ಬಳಸುವ ಸಾಧನ, ಸಂಗೀತ ವಾದ್ಯ ಬಳಸುವಂತಿಲ್ಲ.
ಇನ್ನು ವಸತಿ ಪ್ರದೇಶದಲ್ಲಿ ರಾತ್ರಿ ಹೊತ್ತಿನಲ್ಲಿ ಯಾವುದೇ ವ್ಯಕ್ತಿ (ಪೊಲೀಸ್, ಅಂಬುಲೆನ್ಸ್, ಅಗ್ನಿಶಾಮಕ ಹೊರತುಪಡಿಸಿ) ಧ್ವನಿ ಹೊರಸೂಸುವ ನಿರ್ಮಾಣ ಉಪಕರಣಗಳನ್ನು ಬಳಸಿ ಮೌನ ವಲಯದಲ್ಲಿ ಧ್ವನಿವರ್ಧಕವನ್ನು ಬಳಸಬಾರದು.
ಜಿಲ್ಲಾ ಚುನಾವಣಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರ ಹಾಗು ಡಿ.ಎಸ್.ಪಿ. ಅವರ ಅನುಮತಿಯ ಹೊರತು ಮತದಾನ ಅಂತ್ಯದ 48 ಗಂಟೆ ಮುನ್ನದ ಅವಧಿ ಮತ್ತು ಮತ ಎಣಿಕೆ ಕಾರ್ಯ ಮುಗಿಯುವರೆಗೂ ಎಲ್ಲಾ ವಿಧದ ಲೌಡ್ ಸ್ಪೀಕರ್, ಸಾರ್ವಜನಿಕ ಸಂಭೋಧನಾ ವ್ಯವಸ್ಥೆಯನ್ನು ಸಾರ್ವಜನಿಕ ಸ್ಥಳದಲ್ಲಿ ಬಳಸುವಂತಿಲ್ಲ.
ಈ ಆದೇಶವನ್ನು ಉಲ್ಲಂಘನೆಯಿಂದ ಉದ್ಭವಿಸಬಹುದಾದ ಯಾವುದೇ ಹಾನಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ ಆದೇಶದ ಉಲ್ಲಂಘನೆಯಿಂದ ಯಾರಿಗಾದರೂ ಅಡಚಣೆ, ಹಾನಿ, ಕಿರಿಕಿರಿ ಅಥವಾ ಗಾಯ ಇತ್ಯಾದಿಗಳನ್ನು ಉಂಟುಮಾಡಿದರೆ ಅಥವಾ ಮಾನವನ ಜೀವನ, ಆರೋಗ್ಯ ಅಥವಾ ಸುರಕ್ಷತೆ ಅಥವಾ ಗಲಭೆ ಅಥವಾ ಗಲಭೆಗೆ ಬೆದರಿಕೆಯನ್ನು ಉಂಟುಮಾಡುವ ಪ್ರವೃತ್ತಿಗಳನ್ನು ಸೆಕ್ಷನ್ 188 ಐ.ಪಿ.ಸಿ ಅಡಿಯಲ್ಲಿ ಅಪರಾಧವನ್ನು ಪ್ರತ್ಯೇಕ ಪರಿಗಣಿಸಲಾಗುತ್ತದೆ.
ಈ ಆದೇಶವು ಮುಂದಿನ ಆದೇಶವರಗೆ ಜಿಲ್ಲೆಯಾದ್ಯಂತ ಜಾರಿಯಲ್ಲಿರಲಿದ್ದು, ಸಂಬಂಧಿಸಿದ ಪ್ರಾಧಿಕಾರಗಳು ಇದನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಬೇಕೆಂದು ಡಿ.ಸಿ. ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.