ಪರಮೇಶ್ವರ ಮೇಲಿನ ಹಲ್ಲೆಗೆ ಖಂಡನೆ

ಕಲಬುರಗಿ,ಏ.29-ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಡಿಸಿಎಂ ಮತ್ತು ಹಿರಿಯ ನಾಯಕ ಡಾ.ಜಿ.ಪರಮೇಶ್ವರ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ(ಕೆರಿಬೋಸಗಾ) ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಬರುತ್ತವೆ. ನಾವು ಜನರ ಬಳಿಗೆ ಹೋಗಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ಸಿದ್ದಾಂತಗಳು ಹೇಳಿ ಮತಗಳನ್ನು ಪಡೆಯಬೇಕು ಹೊರತು ಈ ರೀತಿ ಹಲ್ಲೆ ಮಾಡುವುದು ಖಂಡನೀಯ. ಕಲ್ಲು ತೂರಿದ್ದರಿಂದ ಡಾ.ಜಿ.ಪರಮೇಶ್ವರ ಅವರ ತಲೆಗೆ ಗಾಯವಾಗಿದೆ.ಇದು ಅತ್ಯಂತ ಹೀನ ಕೃತ್ಯವಾಗಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೇ? ಎಂಬ ಸಂಶಯ ಮೂಡಿದೆ. ಸಿಬಿಐ, ಐಟಿ ದಾಳಿ ನಂತರ ಬಿಜೆಪಿಯವರ ಕಲ್ಲಿನ ದಾಳಿ ನಡೆದಿದೆ. ಇದಕ್ಕೆ ಈ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಪ್ರಜ್ಞಾವಂತ ಮತದಾರರೇ ಉತ್ತರ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.