ಪರಮೇಶ್ವರಿ ದೇವಿ ಮೆರವಣಿಗೆ, ವಿಸರ್ಜನೆ

ಮಾಲೂರು.ಅ೨೫:ಶ್ರೀ ಶರನ್ನಾವರಾತ್ರಿ ಮಹೋತ್ಸವ ಪ್ರಯುಕ್ತ ಪಟ್ಟಣದ ಮಾರಿಕಾಂಬ ದೇವಾಲಯದ ಆವರಣದಲ್ಲಿ ವಿಶ್ವ ಹಿಂದೂ ಪರಿಷದ್, ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ ೨೧ನೇ ವರ್ಷದ ದುರ್ಗಾದೇವಿ ಪ್ರತಿಷ್ಠಾಪನೆ ಮತ್ತು ಮಾಲೂರು ದಸರಾ ಉತ್ಸವ ಕಾರ್ಯಕ್ರಮ ಅಂಗವಾಗಿ ಶ್ರೀ ದುರ್ಗಾ ಪರಮೇಶ್ವರಿ ದೇವಿಯನ್ನು ವಿವಿಧ ರೀತಿಯ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಯಿತು.
ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವ ಹಿಂದೂ ಪರಿಷದ್, ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ ಪಟ್ಟಣದ ಮಾರಿಕಾಂಬ ದೇವಾಲಯದ ಆವರಣದಲ್ಲಿ ದುರ್ಗಾದೇವಿ ಪ್ರತಿಷ್ಠಾಪನೆ ಮತ್ತು ಮಾಲೂರು ದಸರಾ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನವರಾತ್ರಿಯ ಮೊದಲನೇ ದಿನವಾದ ಭಾನುವಾರ ಬೆಳಗಿನ ಜಾವ ವರಸಿದ್ಧಿ ವಿನಾಯಕ, ಸುಬ್ರಹ್ಮಣ್ಯ ಸ್ವಾಮಿ, ಲಕ್ಷ್ಮೀದೇವಿ, ಶೃಂಗೇರಿ ಶಾರದಾಂಬೆ, ಸಮೇತ ಶ್ರೀ ದುರ್ಗಾಪರಮೇಶ್ವರಿ ಪ್ರತಿಷ್ಠಾಪಿಸಿ ವಿವಿಧ ರೀತಿಯ ಪೂಜಾ ಕಾರ್ಯಕ್ರಮಗಳು ನಡೆಯಿತು. ಹತ್ತು ದಿನಗಳ ಕಾಲ ಸಂಜೆಯ ವೇಳೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೊದಲನೆಯ ದಿನವಾದ ಭಾನುವಾರ ಸಂಜೆ ಮಾರಿಕಾಂಬ ದೇವಾಲಯ ಟ್ರಸ್ಟ್ ಅವರ ಸಹಕಾರದೊಂದಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸಾಂಸ್ಕೃತಿಕ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ ಚಂದ್ರಶೇಖರ್ ಮತ್ತು ಡಾ ವೈ ಪಿ ನಟರಾಜ್ ತಂಡ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರ ತಂಡದಿಂದ ನಾದಸ್ವರ ಕಚೇರಿ, ಅಕ್ಟೋಬರ್ ೧೬ ಸೋಮವಾರ ಸಂಜೆ ವಿದ್ವಾನ್ ಎನ್ ಕೆ ಯಲ್ಲಪ್ಪ ತಂಡ ಆಕಾಶವಾಣಿ ದೂರದರ್ಶನ ಕಲಾವಿದರಿಂದ ಹಿಂದೂಸ್ತಾನಿ ಶಹನಾಯಿ ವಾದನ, ಅಕ್ಟೋಬರ್ ೧೭ರ ಸಂಜೆ ಪಂಡಿತ್ ವೆಂಕಟರಮಣಪ್ಪನವರ ಜ್ಞಾಪಕಾರ್ಥವಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಿಂದುಸ್ತಾನ್ ಡಿಪಾಟ್ಮೆಂಟಲ್ ಸ್ಟೋರ್ಸ್ ಅವರ ಪ್ರಾಯೋಜಕತ್ವದಲ್ಲಿ, ಅಕ್ಟೋಬರ್ ೧೮ರ ಬುಧವಾರ ನಾಟ್ಯವರ್ಧನ ಕಲಾ ಅಕಾಡೆಮಿ ಅವರ ವತಿಯಿಂದ ಭರತನಾಟ್ಯ ಕಾರ್ಯಕ್ರಮ, ಅಕ್ಟೋಬರ್ ೧೯ ರಂದು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಬ್ರಹ್ಮಚಾರಿ ಮತ್ತು ಕುಮಾರಿ ಪ್ರಿಯಬ್ರಹ್ಮ ಅವರಿಂದ ವೈಲಿನ್ ಜುಗಲ್ ಬಂದಿ, ಅಕ್ಟೋಬರ್ ೨೦ರಂದು ಸಂಜೆ ದೀಪೋತ್ಸವ ಕರಾವಳಿ ಯಕ್ಷಗಾನ ಕಲಾವಿದರ ತಂಡದಿಂದ ಮಹಿಷಾಸುರ ಮರ್ದಿನಿ ಯಕ್ಷಗಾನ, ಅಕ್ಟೋಬರ್ ೨೧ರ ಶನಿವಾರ ತರುಣರಿಂದ ಶಾಸ್ತ್ರ ಮತ್ತು ಶಕ್ತಿ ಪ್ರದರ್ಶನ ಹಾಗೂ ಸ್ಯಾಕ್ಸೋ ಫೋನ್ ವಾದನ, ಅಕ್ಟೋಬರ್ ೨೨ ಬೆಳಗ್ಗೆ ೭ ಗಂಟೆಗೆ ದುರ್ಗಾ ಹೋಮ, ಮಾತೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ, ಪಟ್ಟಣದ ಬಾಲ ಗೋಕುಲದ ಮಕ್ಕಳಿಂದ ವಿವಿಧ ಪ್ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಕ್ಟೋಬರ್ ೨೩ ಶ್ರೇಯ ಡಾನ್ಸ್ ಅಕಾಡೆಮಿ ವತಿಯಿಂದ ಭರತನಾಟ್ಯ ಕಾರ್ಯಕ್ರಮ, ಅಕ್ಟೋಬರ್ ೨೪ ಮಂಗಳವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜೀವನ ಚರಿತ್ರೆಯ ಚಿತ್ರ ಪ್ರದರ್ಶನ, ಅಕ್ಟೋಬರ್ ೨೫ರಂದು ಬುಧವಾರ ಹಿಂದೂ ಜಾಗರಣೆ ವೇದಿಕೆಯಿಂದ ಬನ್ನಿ ಮರದ ಪೂಜೆ ಹಾಗೂ ದುರ್ಗಾಪರಮೇಶ್ವರಿಯ ಭವ್ಯ ಮೆರವಣಿಗೆ ವಿವಿಧ ರೀತಿಯ ಕಲಾತಂಡಗಳೊಂದಿಗೆ ಬೃಹತ್ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯಿತು.