ಪರಮಾತ್ಮನ ಪ್ರಾಪ್ತಿಗಾಗಿ ಗುರು ಕಾರುಣ್ಯ ಬೇಕು: ತಮಲೂರು ಶ್ರೀಗಳು

ಬೀದರ್: ಜು.19:ನಿರಾಕಾರ ರೂಪಿ ಪರಮಾತ್ಮನನ್ನು ಕಾಣಲು ದೇವಾಲಯಗಳಲ್ಲಿ ಆತನ ಮೂರ್ತಿ ಸ್ಥಾಪಿಸಿ ಪೂಜಿಸಿ ಜಪ-ತಪಗೈಯಬೇಕು. ಅದಕ್ಕೆ ಸನ್ಮಾರ್ಗ ತೋರಲು ಗುರು ಕಾರುಣ್ಯ ಬೇಕು ಎಂದು ತಮಲೂರು ಶ್ರೀಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ನುಡಿದರು.

ಮಂಗಳವಾರ ನಗರದ ಹೊರ ವಲಯದಲ್ಲಿರುವ ಬೀದರ್-ಭಾಲ್ಕಿ ರಸ್ತೆಯಲ್ಲಿನ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಏಜ್ಯುಕೇಶನ್ ಐಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜರುಗಿದ ಮೊದಲ ದಿವಸದ ಧರ್ಮೋಪದೇಶಗೈದು ಮಾತನಾಡಿ, ಅವ್ಯಕ್ತನಾದ ಆ ಶಿವನನ್ನು ಧ್ಯಾನಿಸಲು ಮೂರ್ತಿ ಮೂಲಕ ಆರಾಧಿಸಬೇಕಾಗುತ್ತದೆ ಎಂದರು.

ಮೂರ್ತಿ ಪೂಜೆ ಮಾಡಿರುವುದರಿಂದ ದೇವರು ಒಲಿಯುವುದಿಲ್ಲವೆಂಬುದು ನಾಸ್ತಿಕರ ಅಭಿಪ್ರಾಯವಾಗಿರುತ್ತದೆ. ಆದರೆ, ಆ ನಿರಾಕಾರ ಭಗವಂತನ ಆರಾಧನೆಗೆ ಅವನ ಮೂರ್ತಸ್ವರೂಪ ನಿರ್ಮಾಣ, ಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಟಾಪನೆ ಎಲ್ಲವೂ ಬೇಕಾಗುತ್ತದೆ. ಈ ಸೃಷ್ಟಿಯಲ್ಲಿ ಆಗು, ಹೋಗುವ ಎಲ್ಲ ಬೆಳವಣಿಗೆ ಶಿವನಿಂದ ಆಗುತ್ತದೆ ಎಂಬ ವಿಷಯ ಕೇವಲ ಗುರುವಿನಿಂದ ತಿಳಿದುಕೊಳ್ಳಲು ಮಾತ್ರ ಸಾಧ್ಯ. ಹೀಗೆ ಗುರುವಾದವನು ಭಕ್ತ ಹಾಗೂ ಭಗವಂತನ ಮಧ್ಯದ ದೂತವೆಂದು ಪ್ರತಿಪಾದಿಸಿದರು.

ಅಧಿಕ ಮಾಸ ಪ್ರತಿ ಮೂರು ವರ್ಷಕ್ಕೊಮ್ಮೆ ಬರುವುದು. ಈ ಮಾಸದಲ್ಲಿ ಅನೇಕ ಮಹತ್ತರ ಧರ್ಮ ಕಾರ್ಯಗಳು ನಡೆಯುದುಂಟು. ಒಂದೆಡೆ ಇದನ್ನು ಅಧಿಕ ಶ್ರಾವಣ ಮಾಸವೆಂದೂ ಸಹ ಕರೆಯಲಾಗುತ್ತದೆ. ಈ ಮಾಸದಲ್ಲಿ ಭಕ್ತ ಹಾಗೂ ಭಗವಂತ ಹತ್ತಿರವಾಗಿ ಧರ್ಮ ಹಾಗೂ ಅಧ್ಯಾತ್ಮ ಎರಡು ಒಂದು ಗೂಡಲು ಅನುವಾಗುತ್ತವೆ ಎಂದರು.

ಮನುಷ್ಯ ಕಣ್ಣಿಗೆ ಕಾಣದನ್ನು ನಂಬದೇ ಇರಬಹುದು. ಆದರೆ, ಸೃಷ್ಟಿಯ ರಚೆತಾ ಹಾಗೂ ಸೂತ್ರಧಾರ ಕೇವಲ; ಪರಮಾತ್ಮ. ತನ್ನ ನೈಜ ಶಕ್ತಿಯನ್ನು ಪೃಕೃತಿ ವಿಕೋಪಗಳು, ಸುನಾಮಿಗಳು ನೆರೆ ಹಾವಳಿ, ಭೂಕಂಪನ ಇತ್ಯಾದಿ ಘಟನಾವಳಿಗಳಿಂದ ತೋರ್ಪಡಿಸುವನು. ಅದನ್ನು ತಡೆಯಲೆಂದೇ ಗುರುವಾದವನು ತನ್ನ ಭಕ್ತರ ಮುಖೇನ ಭಗವಂತನ ಆರಾಧನೆಯ ಮಾರ್ಗ ಕಂಡುಕೊಳ್ಳುವನು. ಗುರು ಹಾಗೂ ಶಿಷ್ಯ ಇಬ್ಬರು ಸೇರಿ ಭಗವಂತನನ್ನು ಆರಾಧಿಸುವ, ಆಸ್ವಾದಿಸುವ ಹಾಗೂ ಅನುಭವಿಸುವ ಕಾರ್ಯ ಮಾಡುವರು ಎಂದರು.

ಮಂಗಳವಾರದಿಂದ ಮುಂದಿನ ಸೋಮವಾರದ ವರೆಗೆ ತಮ್ಮಿಂದ ಜರುಗುವ ,ಮೌನ ಜಪಾನುಷ್ಟಾನದ ಮೂಲಕ ಈ ಭಾಗದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಿ ಅನ್ನದಾತ ಹಾಗೂ ಇತರೆ ವರ್ತಕ ಸಮೂಹ ಸುಖ, ಶಾಂತಿ ಹಾಗೂ ಸಮೃದ್ಧಿಯಿಂದ ಬದುಕುವಂತಾಗಲಿ ಎಂಬುದು ನಮ್ಮ ಸದಾಶಯ. ಹಾಗಾಗಿ ಈ ಪುಣ್ಯ ಕಾಲದಲ್ಲಿ ತಾವು ಭಾಗಿಯಾಗಿ ಗುರು ಕಾರುಣ್ಯಕ್ಕೆ ಪಾತ್ರರಾಗುವಂತೆ ಶ್ರೀಗಳು ಹೇಳಿದರು.

ಇದಕ್ಕೂ ಮೊದಲು ಬಸವರಾಜ ಸ್ವಾಮಿ ಚಿಟ್ಟಾ ಹಾಗೂ ಸಂಗಡಿಗರು ಜಗದ್ಗುರು ರೇಣುಕಾಚಾರ್ಯರಿಗೆ ರುದ್ರಾಭಿಷಕ ನಡೆಸಿಕೊಟ್ಟರು. ನಂತರ ನೆರೆದ ಭಕ್ತಾದಿಗಳು ಸದುರುವಿನ ದರುಶನ ಪಡೆದು ಮಹಾ ಪ್ರಸಾದಗೈದರು.

ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಏಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಷಣ್ಮುಖಯ್ಯ ಸ್ವಾಮಿ ದಂಪತಿಗಳು ಗುರುವಿನ ಪಾದಪೂಜೆಗೈದರು. ಟ್ರಸ್ಟ್ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸ್ವಾಗತ ಕೋರಿದರು. ಕೋಶಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪುರ ಕಾರ್ಯಕ್ರಮ ನಿರೂಪಿಸಿ, ಕಾರ್ತಿಕ ಮಠಪತಿ ವಂದಿಸಿದರು. ನೂರಾರು ಡಾ.ರಾಜಕುಮಾರ ಹೆಬ್ಬಾಳೆ, ಗುಂಡಯ್ಯ ಸ್ವಾಮಿ ಔರಾದ್ ಸೇರಿದಂತೆ ಹಲವಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.