
ಮಾಸ್ಕೋ, ನ.೬- ಕ್ಷಣಕ್ಷಣಕ್ಕೂ ಬದಲಾಗುವ ಜಾಗತಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಲವು ದೇಶಗಳು ತಮ್ಮ ಮಿಲಿಟರಿ ಸಾಮರ್ಥ್ಯವನ್ನು ಬಲಪಡಿಸುತ್ತಿದ್ದು, ರಷ್ಯಾ ಕೂಡ ಇದೇ ಹಾದಿಯಲ್ಲಿದೆ. ತನ್ನ ಜಲಾಂತರ್ಗಾಮಿ ನೌಕೆಯಿಂದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿರುವುದಾಗಿ ರಷ್ಯಾ ಇದೀಗ ಬಹಿರಂಗಪಡಿಸದೆ.
ಪರಮಾಣು ಪರೀಕ್ಷಾ ನಿಷೇಧ ಒಪ್ಪಂದದ ಅನುಮೋದನೆಯನ್ನು ರದ್ದುಪಡಿಸಿದ ನಂತರ ರಷ್ಯಾ ಇತ್ತೀಚಿಗಿನ ದಿನಗಳಲ್ಲಿ ತನ್ನ ಪರಮಾಣು ಚಟುವಟಿಕೆಗಳನ್ನು ನಿರಂತವಾಗಿ ಹೆಚ್ಚಿಸುತ್ತಿದೆ. ಇದರ ಭಾಗವಾಗಿ ಇದೀಗ ?ಬುಲವಾ? ಕ್ಷಿಪಣಿಯ ಉಡಾವಣೆವನ್ನು ಯಶಸ್ವಿಯಾಗಿ ಮಾಡಿದೆ ಎಂದು ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾದ ರಕ್ಷಣಾ ಸಚಿವಾಲಯ, ಹೊಸ ಪರಮಾಣು-ಚಾಲಿತ ಕಾರ್ಯತಂತ್ರದ ಕ್ಷಿಪಣಿ ಜಲಾಂತರ್ಗಾಮಿ ?ಅಲೆಕ್ಸಾಂಡರ್ ದಿ ಥರ್ಡ್?ನಿಂದ ಬುಲಾವಾ ಸಮುದ್ರ ಆಧಾರಿತ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ರಷ್ಯಾದ ವಾಯುವ್ಯ ಕರಾವಳಿಯ ಬಿಳಿ ಸಮುದ್ರದಲ್ಲಿನ ಅಜ್ಞಾತ ಸ್ಥಳದಿಂದ ಸಮುದ್ರದೊಳಗಿನ ಕ್ಷಿಪಣಿಯನ್ನು ದೂರದ ಪೂರ್ವ ಕಂಚಟ್ಕಾ ಪರ್ಯಾಯ ದ್ವೀಪದಲ್ಲಿ ಸಾವಿರಾರು ಕಿಲೋಮೀಟರ್ ದೂರದ ಗುರಿಯತ್ತ ಹಾರಿಸಿದೆ. ನೀರಿನಡಿಯಿಂದ ಸಾಮಾನ್ಯ ಸ್ಥಿತಿಯಲ್ಲಿ ಕ್ಷಿಪಣಿ ಪರೀಕ್ಷೆ ನಡೆಯಿತು ಎಂದು ಅದು ತಿಳಿಸಿದೆ. ೧೨ ಮೀ ಉದ್ದದ ಬುಲಾವಾ ಕ್ಷಿಪಣಿಯನ್ನು ಮಾಸ್ಕೋದ ಪರಮಾಣು ದಾಳಿಯ ಬೆನ್ನೆಲುಬಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ಸುಮಾರು ೮,೦೦೦ ಕಿಮೀ ವ್ಯಾಪ್ತಿಯನ್ನು ಹೊಂದಿದೆ ಎನ್ನಲಾಗಿದೆ.