ಪರಮಾಣು ಶಸ್ತ್ರಾಸ್ತ್ರ ರದ್ದು ಬೈಡೆನ್ ಆಕ್ರೋಶ

ನ್ಯೂಯಾರ್ಕ್, ಫೆ.೨೩- ಪರಮಾಣು ಶಸ್ತ್ರಾಸ್ತ್ರ ಒಪ್ಪಂದವನ್ನು ರದ್ದು ಪಡಿಸಿರುವ ರಷ್ಯಾದ ನಿರ್ಧಾರ ದೊಡ್ಡ ಪ್ರಮಾದದಿಂದ ಕೂಡಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
೨೦೧೦ರಲ್ಲಿ ಅಮೆರಿಕಾ ಹಾಗೂ ರಷ್ಯಾ ಜಂಟಿಯಾಗಿ ಈ ಒಪ್ಪಂದಕ್ಕೆ ಸಹಿ ಹಾಕಿಕೊಂಡಿತ್ತು. ಆಗಿನ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಹಾಗೂ ರಷ್ಯಾದ ಅಧ್ಯಕ್ಷ ದಿಮಿತ್ರಿ ಮದ್ವದೆವ್ ನೇತೃತ್ವದಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರನ್ವಯ ಎರಡೂ ದೇಶಗಳು ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ಮಿತಿಯಲ್ಲಿ ಇಟ್ಟುಕೊಂಡು, ನಿಯಂತ್ರಣ ಸಾಧಿಸುವುದಾಗಿತ್ತು. ಅಲ್ಲದೆ ಒಬ್ಬರು ಮತ್ತೊಬ್ಬರ ಪರಮಾಣು ಅಸ್ತ್ರಗಳ ಮಾಹಿತಿ ನೀಡುವುದಾಗಿತ್ತು. ಆದರೆ ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದ ವೇಳೆ ರಷ್ಯಾ ಅಧ್ಯಕ್ಷ ಪುಟಿನ್ ಅವರು ಪರಮಾಣು ಶಸ್ತ್ರಾಸ್ತ್ರ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಪ್ರಕಟಿಸಿದ್ದರು. ಇನ್ನು ಅತ್ತ ಪರಮಾಣು ಒಪ್ಪಂದದಲ್ಲಿ ಪಾಲ್ಗೊಳ್ಳುವಿಕೆಯನ್ನು ಅಮಾನತುಗೊಳಿಸುವ ಪುಟಿನ್ ಅವರ ನಿರ್ಧಾರವನ್ನು ರಷ್ಯಾದ ಸಂಸತ್ತಿನ ಉಭಯ ಸದನಗಳು ಬುಧವಾರ ಅಧಿಕೃತವಾಗಿ ಅನುಮೋದಿಸಿವೆ. ಆದರೆ ರಷ್ಯಾದ ವಿದೇಶಾಂಗ ಸಚಿವಾಲಯವು ನಂತರ ಮಾಸ್ಕೋ ಜವಾಬ್ದಾರಿಯುತ ವಿಧಾನದಲ್ಲಿ ಹೊಸ ಒಪ್ಪಂದದ ನಿರ್ಬಂಧಗಳ ಅನುಸರಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಇನ್ನು ರಶ್ಯಾದ ಹೊಸ ನಡೆ ಸಹಜವಾಗಿಯೇ ನ್ಯಾಟೋ ಪಡೆ ಸೇರಿದಂತೆ ಹಲವು ದೇಶಗಳಲ್ಲಿ ಪರಮಾಣು ಯುದ್ದದ ಭೀತಿ ಆವರಿಸಿದೆ. ಸದ್ಯ ಈ ಬಗ್ಗೆ ಪೋಲೆಂಡ್‌ನಲ್ಲಿ ಮಾತನಾಡಿರುವ ಬೈಡೆನ್, ಒಪ್ಪಂದ ಅಮಾನತುಗೊಳಿಸಿರುವುದು ದೊಡ್ಡ ತಪ್ಪಾಗಿದೆ. ಅಮೆರಿಕಾ ಮಿಲಿಟಿರ ಮೈತ್ರಿಯ ಬದ್ಧತೆಯನ್ನು ಪುನರುಚ್ಛರಿಸುತ್ತದೆ. ನಾವು ನ್ಯಾಟೋ ಸದಸ್ಯ ರಾಷ್ಟ್ರಗಳ ಪ್ರತೀ ಇಂಚು ಭೂಮಿಯ್ನು ರಕ್ಷಿಸಲು ಬದ್ಧರಾಗಿದ್ದೇವೆ. ಅಲ್ಲದೆ ಪವಿತ್ರ ಆರ್ಟಿಕಲ್ ಐದಕ್ಕೆ ನಾವು ಬದ್ದರಾಗಿದ್ದೇವೆ ಎಂದು ಬೈಡೆನ್ ತಿಳಿಸಿದ್ದಾರೆ.