ಮಾಸ್ಕೋ, ಜು.೧- ಪರಮಮಿತ್ರ ರಾಷ್ಟ್ರ ಬೆಲರೂಸ್‌ನಲ್ಲಿ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವುದನ್ನು ಈಗಾಗಲೇ ರಷ್ಯಾ ಒಪ್ಪಿಕೊಂಡಿದೆ. ಈ ನಡುವೆ ಬೆಲರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದು, ಪರಮಾಣು ಶಸ್ತ್ರಾಸ್ತ್ರಗಳನ್ನು ಎಂದಿಗೂ ಬಳಸುವುದಿಲ್ಲ ಎಂದು ತಿಳಿಸಿದ್ದಾರೆ.
ಶುಕ್ರವಾರ ರಷ್ಯಾದ ರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ಲುಕಾಶೆಂಕೊ ಅವರು ಭಾಷಣದಲ್ಲಿ ಮಾತನಾಡುತ್ತಾ, ಬೆಲಾರಸ್‌ನಲ್ಲಿ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಇರಿಸುವುದು ನನ್ನ ದೃಢವಾದ ನಿರ್ಣಯವಾಗಿದೆ. ಶಸ್ತ್ರಾಸ್ತ್ರಗಳು ನಮ್ಮ ನೆಲದಲ್ಲಿ ಇರುವಾಗ ನಾವು ಅವುಗಳನ್ನು ಬಳಸಬಾರದು ಎಂಬುದು ನಮ್ಮ ನಿರ್ಣಯ. ಈ ಶಸ್ತ್ರಾಸ್ತ್ರಗಳು ನಮ್ಮಲ್ಲಿ ಇರುವರೆಗೂ ನಮ್ಮ ನೆಲಕ್ಕೆ ಶತ್ರುಗಳು ಕಾಲಿರಿಸುವುದಿಲ್ಲ. ಅದೂ ಅಲ್ಲದೆ ಸಂಭಾವ್ಯ ಆಕ್ರಮಣಕಾರರನ್ನು ತಡೆಯಲು ಪರಮಾಣು ನಿಯೋಜನೆ ಅಗತ್ಯ ಎಂದು ಅವರು ತಿಳಿಸಿದ್ದಾರೆ. ಬೆಲರೂಸ್‌ನಲ್ಲಿ ರಷ್ಯಾ ಈ ಹಿಂದೆಯೇ ಯುದ್ದತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ದಾಸ್ತಾನು ಇರಿಸಲಾಗಿದ್ದರೂ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆಯಷ್ಟೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡುವ ಮೂಲಕ ಜಾಗತಿಕ ಮಟ್ಟ ಅದರಲ್ಲೂ ವಿರೋಧಿ ಬಣ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಆಘಾತ ನೀಡಿತ್ತು. ಇನ್ನು ಬೆಲರೂಸ್‌ನಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆಯ್ ರಿಯಾಬ್ಕೊವ್, ಬೆಲರೂಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರದ ನಿಯೋಜನೆಯು ೧೯೬೮ ರ ಪರಮಾಣು ಪ್ರಸರಣ ರಹಿತ ಒಪ್ಪಂದವನ್ನು ಉಲ್ಲಂಘಿಸುವುದಿಲ್ಲ. ಏಕೆಂದರೆ ಶಸ್ತ್ರಾಸ್ತ್ರಗಳ ಮೇಲೆ ರಷ್ಯಾ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ. ಎಂದು ತಿಳಿಸಿದ್ದಾರೆ. ಹಿಂದಿನಿಂದಲೂ ಪ್ರತಿ ಹಂತದಲ್ಲೂ ರಷ್ಯಾಗೆ ಬೆಲರೂಸ್ ಬೆಂಬಲ ನೀಡುತ್ತಿದೆ. ಇತ್ತೀಚಿಗೆ ವ್ಯಾಗ್ನರ್ ಪಡೆ ರಷ್ಯಾದಲ್ಲಿ ದಂಗೆ ಏಳಲು ಯತ್ನಿಸಿದಾಗ ಬೆಲರೂಸ್ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ತಿಳಿಗೊಳಿಸಿತ್ತು. ಈ ಮೂಲಕ ಪುಟಿನ್ ಮೇಲಿನ ದೊಡ್ಡ ಅಪಾಯವನ್ನು ಪಾರುಮಾಡಿತ್ತು.