ಪರಮಾಣು ಶಕ್ತಿ ಸದುಪಯೋಗವಾಗಲಿ

ಕಲಬುರಗಿ:ಆ.6: ಪರಮಾಣು ಶಕ್ತಿಯನ್ನು ಬಳಸಿಕೊಂಡು ಹಿರೋಷಿಮಾ ಮತ್ತು ನಾಗಾಷಕಿಯ ಮೇಲೆ ದಾಳಿಮಾಡುವ ಮೂಲಕ ಅನೇಕ ಜನರ ಸಾವಿಗೆ ಕಾರಣವಾದದ್ದು ಮರೆಯುವಂತಿಲ್ಲ. ಇದು ಮಾನವನಿಗೆ ಒಂದು ಪಾಠವಾಗಿದೆ. ಇದೇ ಶಕ್ತಿಯನ್ನು ಬಳಸಿಕೊಂಡು ವಿದ್ಯುಚ್ಛಕ್ತಿ ಉತ್ಪಾದನೆ, ಕೈಗಾರಿಕಾ ಕೇತ್ರ ಸೇರಿದಂತೆ ಮತ್ತಿತರರ ಅಭಿವೃದ್ಧಿಗಾಗಿ ಬಳಸಿದರೆ, ನಾಶವಾಗುವುದ ತಪ್ಪುತ್ತದೆ ಮತ್ತು ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯವಿದೆಯೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

  ಅವರು ನಗರದ ಆಳಂದ ರಸ್ತೆಯ, ದೇವಿ ನಗರದಲ್ಲಿರುವ 'ಎಮ್.ಎಮ್.ಎನ್. ಟ್ಯೂಟೋರಿಯಲ್ಸ್'ನಲ್ಲಿ, 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 'ಹಿರೋಷಿಮಾ ಮತ್ತು ನಾಗಾಷಕಿ ಕರಾಳ ದಿನಾಚರಣೆ'ಯ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
   ಯುದ್ದದಿಂದ ಯಾವುದೇ ರಾಷ್ಟ್ರವು ಪ್ರಗತಿ ಕಾಣಲು ಸಾಧ್ಯವಿಲ್ಲ. ಬದಲಿಗೆ ಪರಸ್ಪರ ಪ್ರೀತಿ, ಸ್ನೇಹ, ಸಹಕಾರ ಮನೋಭಾವನೆಯಿಂದ ಕಾರ್ಯನಿರ್ವಹಿಸದರೆ, ದೇಶದಲ್ಲಿ ಶಾಂತಿ ನೆಲೆಸಿ, ಅಭಿವೃದ್ಧಿಯಾಗುತ್ತದೆ. ಇದನ್ನು ಪ್ರತಯೊಂದು ದೇಶವು ಅರ್ಥಮಾಡಿಕೊಂಡು ಕೆಲಸ ಮಾಡಬೇಕಾಗಿದೆ. ಪರಮಾಣು ಶಕ್ತಿಯು ಬಹುವಿಧ ಉಪಯೋಗವನ್ನು ಹೊಂದಿದ್ದು, ಅದನ್ನು ಸಂಪೂರ್ಣವಾಗಿ ಶಾಂತಿ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಉಪಯೋಗಿಸಬೇಕಾದದ್ದು ತುಮಬಾ ಅವಶ್ಯಕವಾಗಿದೆಯೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಮರ ಬಂಗರಗಿ, ಬಳಗದ ಸದಸ್ಯರುಗಳಾದ ಬಸವರಾಜ ಪುರಾಣೆ, ಅಣ್ಣಾರಾಯ ಮಂಗಾಣೆ, ಶಿವಕುಮಾರ ಹಿರೇಮಠ, ಎಸ್.ಎಸ್.ಪಾಟೀಲ, ಮಹೇಶ, ಗಣೇಶ ಗೌಳಿ, ಓಂಕಾರ ಗೌಳಿ ಸೇರಿದಂತೆ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.