ಪರಪ್ಪನ ಅಗ್ರಹಾರಕ್ಕೆ ರಾಜೇಶ್ವರಿ ಶೆಟ್ಟಿ ಹಸ್ತಾಂತರ

ಉಡುಪಿ, ಜೂ.೧೦- ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಜೇಶ್ವರಿ ಶೆಟ್ಟಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಆಕೆಗೆ ಜೈಲಿನ ಪ್ರತ್ಯೇಕ ಸೆಲ್‌ನಲ್ಲಿ ೧೪ ದಿನಗಳ ಕಾಲ ಕ್ವಾರಂಟೈನ್ ವಿಧಿಸಲಾಗಿದೆ.
ಜೂ.೮ರಂದು ನ್ಯಾಯಾಲಯ ಮೂವರು ಆರೋಪಿಗಳಿಗೆ ಜೀವಿತಾವಧಿ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಯನ್ನು ವಶಕ್ಕೆ ಪಡೆದು, ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಮೊದಲು ಆಕೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಫಿವರ್ ಕ್ಲಿನಿಕ್‌ನಲ್ಲಿ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ರ್ಯಾಪಿಡ್ ಟೆಸ್ಟ್ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಆ ಬಳಿಕ ಮಣಿಪಾಲ ಪೊಲೀಸರು, ಮಹಿಳಾ ಠಾಣೆಯ ಎಸ್‌ಐ, ಸಶಸ್ತ್ರ ಹೊಂದಿರುವ ಸಿಬ್ಬಂದಿ ಜೊತೆ ರಾಜೇಶ್ವರಿ ಶೆಟ್ಟಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಅದೇ ದಿನ ರಾತ್ರಿ ೧೦ಗಂಟೆಗೆ ಬೆಂಗಳೂರು ತಲುಪಿರುವ ಆಕೆಯನ್ನು ಪೊಲೀಸರು ಅಲ್ಲಿ ಪರಪ್ಪನ ಅಗ್ರಹಾರಕ್ಕೆ ಹಸ್ತಾಂತರಿಸಿದರು. ಜೈಲಿನಲ್ಲಿರುವ ಪ್ರತ್ಯೇಕ ಸೆಲ್‌ನಲ್ಲಿ ೧೪ ದಿನಗಳ ಕ್ವಾರಂಟೈನ್ ಮುಗಿಸಿ ಶಿಕ್ಷೆ ಬಂಧಿಯಾಗಿರುವ ಸೆಲ್‌ನಲ್ಲಿ ಆಕೆಯನ್ನು ಹಾಕಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈಗಾಗಲೇ ರಾಜೇಶ್ವರಿ ಶೆಟ್ಟಿಯ ಮಗ ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ ಬೆಂಗಳೂರಿನ ಜೈಲಿನಲ್ಲಿದ್ದಾರೆ.