ಪರದೆಯಲ್ಲಿ ಮುಖ ತೋರಿಸಿದರೆ ಕೊರೋನಾ ಹೋಗಲ್ಲ: ರಾಜ್ಯದ ಬೇಡಿಕೆ ಈಡೇರಿಸಿ ಪ್ರಧಾನಿಗೆ ಸಿದ್ದು ಆಗ್ರಹ

ಬೆಂಗಳೂರು, ಏ.24- ಪ್ರಧಾನಿ‌ ನರೇಂದ್ರ ಮೋದಿ ಅವರೇ,ಪರದೆಯಲ್ಲಿ ಮತ್ತೆಮತ್ತೆ ಮುಖತೋರಿಸಿದರೆ ಕೊರೊನಾ ವೈರಸ್ ಓಡಿಹೋಗುವುದಿಲ್ಲ,‌ ಮೊದಲು ರಾಜ್ಯಗಳ ಬೇಡಿಕೆಗಳನ್ನು ಈಡೇರಿಸಿ, ಸೋಂಕು ನಿಯಂತ್ರಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಆಗಾಗ‌ ಮುಖ್ಯಮಂತ್ರಿಗಳಿಗೆ ಪಾಠ‌ಮಾಡಲು ನೀವು ಹೆಡ್‌ಮಾಸ್ಟರ್ ಕೂಡಾ ಅಲ್ಲ ಎಂದು ಎಂದಿದ್ದಾರೆ.

ಪ್ರತಿಯೊಂದು ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಮ್ಲಜನಕ ಇಲ್ಲದೆ ಸಾಯುತ್ತಿದ್ದಾರೆ .ಆಮ್ಲಜನಕ ಪೂರೈಕೆ ಮಾಡಿ‌ ಎಂದರೆ ಅಕ್ರಮ ದಾಸ್ತಾನು‌ ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಎಂದು ಕರೆ ನೀಡುತ್ತೀರಿ ಎಂದು ತಿರುಗೇಟು ನೀಡಿದ್ದಾರೆ.

ಈ ಸಂಬಂದ ಟ್ವೀಟ್ ಮಾಡಿರುವ ಅವರು ನೀವೇನು ರಾಜ್ಯಗಳ‌ ಅನುಮತಿ ಪಡೆದು ಆಮ್ಲಜನಕ ರಪ್ತು ಮಾಡಿದ್ದೀರಾ ಪ್ರಧಾನ ಮಂತ್ರಿಗಳೆ ಎಂದು ಪ್ರಶ್ನಿಸಿದ್ದಾರೆ.

ಜನರ ಗತಿಯೇನು?

ಬೆಂಗಳೂರಿನಲ್ಲಿ ಶೇ 65ರಷ್ಟು ಸಾಮಾನ್ಯ ಹಾಸಿಗೆ, ಶೇ 96ರಷ್ಟು ಬಹು ಅವಲಂಬನೆಯ ಹಾಸಿಗೆ, ಶೇ 98ರಷ್ಟು ಐಸಿಯು ಹಾಸಿಗೆ ಮತ್ತು ಶೇ 97ರಷ್ಟು ವೆಂಟಿಲೇಟರ್ ಹಾಸಿಗೆ ಭರ್ತಿಯಾಗಿವೆ.
ನಿತ್ಯ 15 ಸಾವಿರಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆ ಎದುರು ಕ್ಯೂ ನಿಲ್ಲುತ್ತಿದ್ದಾರೆ. ಅವರದ್ದೇನು ಗತಿ ಎಂದಿದ್ದಾರೆ.

ಬೆಂಗಳೂರಿನ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಮೀಸಲಾದ ಹಾಸಿಗೆಗಳು 7621, ಭರ್ತಿಯಾಗಿರುವುದು 6123, ಲಭ್ಯ ಇರುವುದು 1487. ನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ 15ಸಾವಿರಕ್ಕೂ ಹೆಚ್ಚು.
ಈ ವಾಸ್ತವವನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಿಮಗೇನಾದರೂ ತಿಳಿಸಿದ್ದಾರೆಯೇ ಎಂದು ಪ್ರಧಾನಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

‘ಪರಿಸ್ಥಿತಿ ಕೈಮೀರಿಹೋಗಿದೆ’ ಎಂದು ಮುಖ್ಯಮಂತ್ರಿ ಯಡಿಯುರಪ್ಪ ಅವರು ಜನತೆಯ ಮುಂದೆ ಗೋಳಾಡುತ್ತಿರುವುದರಿಂದ ಪ್ರಶ್ನೆ ನಿಮ್ಮನ್ನೇ ಕೇಳಬೇಕಾಗಿದೆ ಎಂದು ಪ್ರಧಾನಿ ಅವರನ್ನು ‌ಪ್ರಶ್ನಿದ್ದಾರೆ.

ಕೈಲಾಗದ ಮುಖ್ಯಮಂತ್ರಿಯವರನ್ನು ಇಟ್ಟುಕೊಂಡು ಕೊರೊನಾ ನಿಯಂತ್ರಣ ಮಾಡುವುದಾದರೂ ಹೇಗೆ ಪ್ರಧಾನಿಗಳೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ