ಪಯಸ್ವಿನಿ ನೀರಲ್ಲಿ ಮುಳುಗಿ ಬಿಹಾರದ ಯುವಕ ಸಾವು

ಉಪವಾಸದ ಸಂದರ್ಭದಲ್ಲೂ  ನೀರಲ್ಲಿ ಮುಳುಗಿ ಮೃತದೇಹ ಹೊರತೆಗೆದ ಮುಳುಗು ತಜ್ಞರು

ಸುಳ್ಯ, ಮೇ ೧೩-ಸುಳ್ಯದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋದ ಬಿಹಾರ ಮೂಲದ ಯುವಕರಲ್ಲಿ ಓರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದ್ದು, ಮೃತದೇಹವನ್ನು ಪೈಚಾರಿನ ಮುಳುಗು ತಜ್ಞರ ತಂಡ ಹೊರಕ್ಕೆ ತೆಗೆದ ಘಟನೆ ಮಂಗಳವಾರ ವರದಿಯಾಗಿದೆ.
ಅರಂಬೂರಿನ ಪ್ರೀತಂ ಹೊಲ್ಲೋ ಬ್ಲಾಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬಿಹಾರ ಮಾಡುವ ಯುವಕರು ನಿನ್ನೆ ಮಧ್ಯಾಹ್ನ ಸ್ನಾನಕ್ಕೆಂದು ಪಾಲಡ್ಕ ಸಮೀಪ ಪಯಸ್ವಿನಿ ನದಿಗೆ ಹೋಗಿದ್ದರು. ಸ್ನಾನಕ್ಕೆ ಹೋದವರಲ್ಲಿ ಕುಂದನ್ ಎಂಬ ಒಬ್ಬ ಯುವಕ ಮಾತ್ರ ಮೇಲಕ್ಕೆ ಬಂದಿರಲಿಲ್ಲ. ಈತ ಬಾರದಿರುವ ವಿಚಾರ ಸಂಜೆಯ ವೇಳೆಗೆ ಆ ಯುವಕರಿಗೆ ಗೊತ್ತಾದುದೆನ್ನಲಾಗಿದೆ. ಸಂಜೆಯ ಬಳಿಕ ಹುಡುಕಾಡಿದರೂ ಆತನ ಪತ್ತೆಯಾಗಲಿಲ್ಲ. ಬುಧವಾರ ಬೆಳಿಗ್ಗೆ ಪೈಚಾರಿನ ಆರ್.ಬಿ.ಬಶೀರ್ ನೇತೃತ್ವದ ಮುಳುಗು ತಜ್ಞರ ತಂಡಕ್ಕೆ ಕರೆ ಹೋಗಿ ಅವರು ಬಂದು ನೀರಲ್ಲಿ ಮುಳುಗಿ ಹುಡುಕಾಡಿ ಕುಂದನ್ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆದರು.
ಈ ಕಾರ್ಯಾಚರಣೆಯಲ್ಲಿ ಆರ್.ಬಿ.ಬಶೀರ್ ಜೊತೆಗೆ ಶರೀಫ್ ಟಿ.ಎ., ಅಬ್ಬಾಸ್ ಶಾಂತಿನಗರ, ಲತೀಫ್ ಬೊಳುಬೈಲು, ರಿಫಾಯಿ ಸೋಣಂಗೇರಿ, ಬಶೀರ್ ಕೆ.ಪಿ. ಮೊದಲಾದವರು ಭಾಗವಹಿಸಿದ್ದರು. ರಂಝಾನ್ ಉಪವಾಸದಲ್ಲಿ ತೊಡಗಿದ್ದರೂ ಈ ಯುವಕರು ಈ ಕಾರ್ಯ ನೆರವೇರಿಸಿರುವುದು ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ.