ಪಯಸ್ವಿನಿ ನದಿಯಲ್ಲಿ ಸತ್ತು ತೇಲುತ್ತಿರುವ ಮೀನುಗಳು-ಸ್ಥಳಕ್ಕೆ ನ.ಪಂ.ಅಧ್ಯಕ್ಷರು ಭೇಟಿ

ಸುಳ್ಯ , ಎ.೨೯- ಸುಳ್ಯದ ಪಯಸ್ವಿನಿ ನದಿಯಲ್ಲಿ ಮೀನುಗಳು ಸತ್ತು ತೇಲುತ್ತಿರುವ ವಿದ್ಯಮಾನ ಬುಧವಾರ ಬೆಳಕಿಗೆ ಬಂದಿದೆ.
ಸುಳ್ಯ ನಗರ ಸಮೀಪ ಭಸ್ಮಡ್ಕ ಭಾಗದಲ್ಲಿ ಸಾವಿರಾರು ಮೀನುಗಳು ಸತ್ತು ನೀರಿನಲ್ಲಿ ತೇಲಿಕೊಂಡು ಬರುತ್ತಿದೆ. ಸಣ್ಣ ಮರಿ ಮೀನುಗಳಿಂದ ಹಿಡಿದು ದೊಡ್ಡ ಮೀನುಗಳು ಸಮೇತ ಸತ್ತಿದೆ. ಭಸ್ಮಡ್ಕ ಭಾಗದಲ್ಲಿ ಈ ರೀತಿ ಹೆಚ್ಚು ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿರುವುದು ಸಂಗ್ರಹವಾಗಿರುವುದು ಕಂಡು ಬಂದಿದೆ. ಮೇಲಿನಿಂದ ನೀರಿನಲ್ಲಿ ಸತ್ತ ಮೀನುಗಳು ತೇಲಿ ಕೊಂಡು ಬರುತಿದೆ. ಸಾಕಷ್ಟು ಮಳೆ ಸುರಿದು ನದಿಯಲ್ಲಿ ನೀರಿದ್ದರೂ ಈ ರೀತಿ ಮೀನುಗಳು ಸಾಯುತ್ತಿರುವುದು ಯಾಕೆ ಎಂಬ ಶಂಕೆ ಮೂಡಿದೆ. ಪಯಸ್ವಿನಿ ನದಿಯಲ್ಲಿ ಮೀನುಗಳ ಸತ್ತು ತೇಲುತ್ತಿರುವ ವಿಷಯ ತಿಳಿದು ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ್, ನ ಪಂ ಸದಸ್ಯ ಸುಧಾಕರ್ ಇದ್ದರು. ನದಿ ನೀರಿನಲ್ಲಿ ವಿಷ ಹಾಕಿರುವ ಸಾಧ್ಯತೆಯಿದ್ದು, ಸತ್ತ ಮೀನು ಹಾಗೂ ನದಿಯ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿದ್ದು ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ನೀರಿನಲ್ಲಿ ಮೀನುಗಳು ಸತ್ತು ತೇಲಿಕೊಂಡು ಬರುವುದು ಕಂಡು ಬಂದಿದೆ. ನಗರಕ್ಕೆ ನೀರು ಸರಬರಾಜಾಗುವ ಕಲ್ಲುಮುಟ್ಲು ಭಾಗದಲ್ಲಿ ಇದು ಇಲ್ಲ. ನಾಗಪಟ್ಟಣ ಸೇತುವೆಯಿಂದ ಕೆಳ ಭಾಗದಲ್ಲಿ ಈ ರೀತಿಯ ವಿದ್ಯಮಾನ ಕಂಡು ಬಂದಿದೆ ಎಂದು ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ. ನಿನ್ನೆ ಸಂಜೆಯವರೆಗೆ ಈ ರೀತಿ ಇರಲಿಲ್ಲ, ಇಂದು ಬೆಳಿಗ್ಗೆಯಿಂದ ಮೀನುಗಳು ಸತ್ತು ತೇಲುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.