ಪಬ್ಲಿಕ್ ಪರೀಕ್ಷೆ ರದ್ದು ಮಾಡುವಂತೆ ಒತ್ತಾಯ

ಮುಳಬಾಗಿಲು, ಮಾ.೨೩- ೫ ಮತ್ತು ೮ ನೇ ತರಗತಿಗಳ ಪಬ್ಲಿಕ್ ಪರೀಕ್ಷೆ ರದ್ದು ಮಾಡಿ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಶೀಘ್ರವಾಗಿ ವಿತರಣೆ ಮಾಡಬೇಕೆಂದು ರೈತ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಶಿಕ್ಷಣ ಎಂಬುದು ವ್ಯಾಪಾರದ ವಸ್ತುವಾಗಿದೆ ದಿನಕ್ಕೊಂದು ಕಾನೂನು ಜಾರಿಗೆ ತರುವ ಸರ್ಕಾರ ಸರ್ಕಾರಿ ಶಿಕ್ಷಣ ಅಭಿವೃದ್ದಿ ಹಾಗೂ ಗುಣಮಟ್ಟದ ಬಗ್ಗೆ ಗಂಭೀರವಾಗಿ ಪರಿಗಣಿಸುವಲ್ಲಿ ವಿಪಲವಾಗಿದೆ. ಕಳೆದ ವರ್ಷ ಸರ್ಕಾರಿ ಶಾಲೆಗಳಿಗೆ ಪಠ್ಯ ಪುಸ್ತಕ ವಿಚಾರದಲ್ಲಿ ರಾಜಕೀಯ ಕಲಬೆರಕೆ ಮಾಡಿ ಕಡೆಗೆ ಹಳೆ ಪಠ್ಯ ಪುಸ್ತಕವನ್ನೇ ನೀಡುವ ಮೂಲಕ ಬಡ ರೈತ ಕೂಲಿಕಾರ್ಮಿಕರ ಭವಿಷ್ಯದ ಬದುಕನ್ನೇ ಕಸಿದು ಶ್ರೀಮಂತರ ಹಾಗೂ ರಾಜಕೀಯ ವ್ಯಕ್ತಿಗಳ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಮುಖಾಂತರ ಶಿಕ್ಷಣ ವಿರೋದಿ ನೀತಿಯನ್ನು ಅನುಸರಿಸುತ್ತಿದ್ದಾರೆಮದು ಶಿಕ್ಷಣದ ಅವ್ಯವಸ್ಥೆ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸರ್ವರಿಗೂ ಶಿಕ್ಷಣ ಕಲ್ಪಿಸುವ ಜವಬ್ದಾರಿಯಲ್ಲಿರುವ ಸರ್ಕಾರ ಏಕಾಏಕಿ ೫ ಮತ್ತು ೮ ನೇತರಗತಿ ಮಕ್ಕಳಿಗೆ ಕಲಿಕಾ ಚೇತರಿಕೆ ಹೆಸರಿನಲ್ಲಿ ಪಬ್ಲಿಕ್ ಪರೀಕ್ಷೆ ನಡೆಸುತ್ತಿರುವುದು ಯಾವ ನ್ಯಾಯ ಇದರಿಂದ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ ಪಬ್ಲಿಕ್ ಪರೀಕ್ಷೆ ನಡೆಸುವ ಮುನ್ನ ಪೂರ್ವ ತಯಾರಿ ಇಲ್ಲದೆ ಇರುವುದು ಸರ್ಕಾರದ ಶಿಕ್ಷಣ ವಿರೋದಿ ನೀತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ್ ಮಾತನಾಡಿ ಸರ್ಕಾರಿ ಶಾಲಾ ಮಕ್ಕಳ ಮೇಲೆ ಪ್ರೀತಿ ಉಕ್ಕಿ ಬಂದಿರುವ ಶಿಕ್ಷಣ ಸಚಿವರೇ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಕಣ್ಣಾರೆ ನೋಡಿದ್ದೀರಾ? ಮಳೆ ಬಂದರೆ ಮಕ್ಕಳು ಭಯದಲ್ಲಿ ಶಾಲೆಗಳಲ್ಲಿ ಪಾಠ ಕೇಳುವ ಜೊತೆಗೆ ಎಲ್ಲಿ ಶಾಲಾ ಮೇಲ್ಛಾವಣಿ ಕುಸಿದು ಬೀಳುತ್ತದೋ ಎಂಬ ಜೀವ ಭಯದಲ್ಲಿ ಪಾಠ ಕೇಳುವ ಮಕ್ಕಳ ಭವಿಷ್ಯ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಸರ್ಕಾರಿ ಶಾಲೆಗಳ ಅವ್ಯವಸ್ಥೆಯಿಂದ ಬೇಸತ್ತಿರುವ ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಜೀವವನ್ನು ಒತ್ತೆ ಇಟ್ಟು ಕೂಲಿ ನಾಲಿ ಮಾಡಿ ಖಾಸಗಿ ಶಾಲೆಗಳಿಗೆ ಸೇರಿಸಿರುವ ಪೋಷಕರಿಗೆ ಸರ್ಕಾರದ ಪಬ್ಲಿಕ್ ಪರೀಕ್ಷೆ ನುಂಗಲಾರದ ತುತ್ತಾಗಿದೆ. ಖಾಸಗಿ ಶಾಲೆಗಳಲ್ಲಿ ಸಿ.ಬಿ.ಎಸ್.ಸಿ ಐ.ಸಿ.ಎಸ್.ಸಿ ಮತ್ತಿತರ ವ್ಯಾಸಾಂಗ ಮಾಡುತ್ತಿರುವ ಮಕ್ಕಳಿಗೆ ಸರ್ಕಾರದ ಪಬ್ಲಿಕ್ ಪರೀಕ್ಷಾ ನೀತಿ ಮುಳವಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
ಮಾನ್ಯ ಶಿಕ್ಷಣ ಸಚಿವರು ೫ ಮತ್ತು ೮ ನೇ ತರಗತಿಗಳ ಪಬ್ಲಿಕ್ ಪರೀಕ್ಷೆ ಆದೇಶವನ್ನು ವಾಪಸ್ಸು ಪಡೆದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಗಂಗರಾಮಯ್ಯ ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ತಾಲ್ಲೂಕಾದ್ಯಕ್ಷ ಯಲುವಲ್ಳಿ ಪ್ರಭಾಕರ್, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಅಂಬ್ಲಿಕಲ್ ಮಂಜುನಾಥ್, ಹೆಬ್ಬಣಿ ಆನಂದ್‌ರೆಡ್ಡಿ, ಬಂಗಾರಿ ಮಂಜು, ರಾಜೇಶ್, ಭಾಸ್ಕರ್, ಗುರುಮೂರ್ತಿ, ಸುನಿಲ್ ಕುಮಾರ್, ಜುಬೇರ್ ಪಾಷ, ವಿಜಯ್‌ಪಾಲ್, ವಿಶ್ವ, ನಂಗಲಿ ನಾಗೇಶ್, ಹೆಬ್ಬಣಿ ರಾಮಮೂರ್ತಿ, ಪದ್ಮಘಟ್ಟ ದರ್ಮ, ಗೀರಿಶ್, ಮುಂತಾದವರಿದ್ದರು.