ಪಬ್‌ನಲ್ಲಿ ವಿದ್ಯಾರ್ಥಿಗಳ ಮೋಜು ಮಸ್ತಿ ಬಜರಂಗದಳ ದಾಳಿ

ಮಂಗಳೂರು,ಜು.೨೬-ನಗರದ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕುಡಿದು ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ಕಳೆದ ರಾತ್ರಿ ಇಲ್ಲಿನ ಪಬ್‌ವೊಂದರ ಮೇಲೆ ದಾಳಿ ನಡೆಸಿದ್ದಾರೆ.
ಫೇರ್‌ವೆಲ್ ನೆಪದಲ್ಲಿ ಪ್ರತಿಷ್ಠಿತ ರಿ-ಸೈಕಲ್ ದಿ ಲಾಂಜ್ ಪಬ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಮಾಡಿದ್ದಾರೆ.
ಪಬ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ತುಂಡುಡುಗೆ ತೊಟ್ಟು ಫೇರ್ ವೆಲ್ ಪಾರ್ಟಿ ಮಾಡಿದ್ದಾರೆ. ಈ ವೇಳೆ ಏಕಾಏಕಿ ಪಬ್‌ಗೆ ನುಗ್ಗಿದ ಭಜರಂಗದಳ ಕಾರ್ಯಕರ್ತರು ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಬುದ್ಧಿ ಹೇಳಿ ಪಬ್‌ನಿಂದ ಹೊರಗೆ ಕಳುಹಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಲಿಪ್ ಲಾಕ್ ವಿಡಿಯೋ ಮೂಲಕ ಮಂಗಳೂರಿನ ಕಾಲೇಜಿನ ವಿದ್ಯಾರ್ಥಿಗಳು ಸುದ್ದಿಯಾಗಿದ್ದರು. ಈಗ ಪದವಿ ವಿದ್ಯಾರ್ಥಿಗಳಿಂದ ಪಬ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಭಜರಂಗದಳದ ಕಾರ್ಯಕರ್ತರು ಪಬ್‌ಗೆ ನುಗ್ಗಿದ್ದರು.
ನಂತರ ಘಟನೆ ಕುರಿತಂತೆ ಮಾಹಿತಿ ದೊರೆತ ಪೊಲೀಸರು, ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ್ದಾರೆ. ಬಳಿಕ ಅರ್ಧದಲ್ಲಿಯೇ ಪಾರ್ಟಿಯನ್ನು ನಿಲ್ಲಿಸಿ ಕಾಲೇಜು ವಿದ್ಯಾರ್ಥಿಗಳು ಪಬ್‌ನಿಂದ ಹೊರನಡೆದಿದ್ದಾರೆ.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಬಜರಂಗದಳದ ಕಾರ್ಯಕರ್ತರನ್ನು ಚದುರಿಸಿದ್ದಾರೆ.