
ಕಲಬುರಗಿ,ಆ.೮-ಪಬ್ಜಿಗೇಮ್ ಆಡುವ ಚಟ ಬೆಳೆಸಿಕೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅದರಲ್ಲಿ ಹಣ ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ದೇವಿ ನಗರದಲ್ಲಿ ನಡೆದಿದೆ.ಪ್ರವೀಣಕುಮಾರ ಶರಣಬಸಪ್ಪ ಪಾಟೀಲ (೨೦) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.ಮೊಬೈಲ್‌ನಲ್ಲಿ ಪಬ್ಜಿ ಗೇಮ್ ಆಡುವ ಚಟ ಬೆಳೆಸಿಕೊಂಡಿದ್ದ ಪ್ರವೀಣಕುಮಾರ ಅದರಲ್ಲಿ ಹಣ ಕಳೆದುಕೊಂಡ ವಿಷಯವನ್ನು ಮನೆಯಲ್ಲಿ ಆಗಾಗ ಹೇಳುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಬ್ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಗೂಟಕ್ಕೆ ಓಡಣಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.ನಗರದ ಖಾಸಗಿ ಇಂಜನೀಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಆರ್ಟಿಫಿಷಿಯಲ್ ಇಂಟಲಿಜನ್ಸ್ ಆಂಡ್ ಮಷಿನ್ ಲನಿಂಗ್ ಕೋರ್ಸ್ ನಲ್ಲಿ ಪ್ರಥಮ ವರ್ಷದ ಎರಡನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದ ಪ್ರವೀಣಕುಮಾರ ಪಬ್ಜಿ-ಆನ್‌ಲೈನ್ ಗೇಮ್ ಆಡುವ ಚಟ ಬೆಳೆಸಿಕೊಂಡಿದ್ದ. ಒಬ್ಬನೇ ಮಗ ಅನ್ನುವ ಕಾರಣಕ್ಕೆ ತಂದೆ-ತಾಯಿ ಮಗನಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದರು. ಆದರೆ ಹೆತ್ತವರು ಮನೆಯಲ್ಲಿ ಇಲ್ಲದೇ ಇದ್ದಾಗ, ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂಜನೀಯರಿಂಗ್ ವಿದ್ಯಾರ್ಥಿ ಸಾವಿಗೆ ಪಬ್ಜಿ ಸೇರಿದಂತೆ ಆನಲೈನ್ ಗೇಮ್ ಹುಚ್ಚು ಮತ್ತು ಅದರಲ್ಲಿ ಹಣ ಕಳೆದುಕೊಂಡಿದ್ದೇ ಕಾರಣವೆಂದು ಹೇಳಲಾಗುತ್ತಿದೆ. ಇದ್ದೊಬ್ಬ ಮಗನನ್ನು ಕಳೆದುಕೊಂಡು ಹೆತ್ತವರ ಆಕ್ರಂದನ ಮಗಿಲು ಮುಟ್ಟಿತ್ತು.ಮೂಲತ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಲಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಶರಣಬಸಪ್ಪ, ಕಲಬುರಗಿ ನಗರದ ದೇವಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ತಾಯಿ ಹೈದ್ರಾಬಾದ್‌ಗೆ ಹೋಗಿದ್ದರೆ, ತಂದೆ ಬೇರೊಂದು ಕೆಲಸದ ಮೇಲೆ ತನ್ನೂರಿಗೆ ಹೋಗಿದ್ದನಂತೆ. ಪ್ರವೀಣಕುಮಾರ ತಾಯಿ ಮನೆಗೆ ಬಂದು ಬಾಗಿಲು ಬಡಿದರೂ ಬಾಗಿಲು ತಗೆಯದೇ ಇದ್ದಾಗ, ಬಾಗಿಲು ಮುರಿದು ಒಳಹೋದಾಗ ಪ್ರವೀಣಕುಮಾರ ಆತ್ಮಹತ್ಯೆ ಮಾಡಿಕೊಂಡ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.